ಶಿವಮೊಗ್ಗ: ಕೆ.ಎಸ್. ಈಶ್ವರಪ್ಪನವರಿಗೆ ನೈತಿಕತೆ ಇದ್ದರೆ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.
ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಶಿವಮೊಗ್ಗ ನಗರ ಅಶಾಂತಿಯಿಂದ ಭುಗಿಲೆದ್ದಿದೆ. ಜಾತಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತಲಾಗಿದೆ. ಕೋಮು ಗಲಭೆಗಳು ಸರಣಿಯಂತೆ ನಡೆದಿವೆ. ಭ್ರಷ್ಟಾಚಾರ ಮಿತಿ ಮೀರಿದೆ. ಈ ಎಲ್ಲದಕ್ಕೂ ಈಶ್ವರಪ್ಪ ಪ್ರಮುಖ ಕಾರಣ. ಶವಗಳ ಮೇಲೆ ಚುನಾವಣೆ ಮಾಡಲು ಅವರು ಹೊರಟಿದ್ದಾರೆ. ಅವರಿಗೆ ನೈತಿಕತೆ ಇದ್ದರೆ ಚುನಾವಣೆಯಿಂದ ಮಾತ್ರವಲ್ಲ, ರಾಜಕಾರಣದಿಂದಲೇ ದೂರ ಇರಬೇಕು ಎಂದರು.
ಬಿಜೆಪಿಯವರು ಕಾಂಗ್ರೆಸ್ ನ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ನಮ್ಮಲ್ಲಿ ಬೇಕಾದಷ್ಟು ಸಂಘಟನೆಗಳಿವೆ. ಯಾವ ಯಾವ ಸಂಘಟನೆಗಳು ಏನೇನೋ ತಪ್ಪು ಮಾಡಿದರೆ ಕಾಂಗ್ರೆಸ್ ಪಕ್ಷವನ್ನು ಮಧ್ಯ ಎಳೆದು ತರುತ್ತಾರೆ. ಯಾರೇ ತಪ್ಪು ಮಾಡಲಿ ಅವರಿಗೆ ಶಿಕ್ಷೆ ಕೊಡಲಿ. ಅದನ್ನು ಬಿಟ್ಟು ಇದಕ್ಕೆ ಕಾಂಗ್ರೆಸ್ಸೇ ಕಾರಣ ಎಂದು ಹೇಳುವ ಪ್ರವೃತ್ತಿಯನ್ನು ಬಿಜೆಪಿ ಬಿಡಬೇಕು ಎಂದರು.
ಈಶ್ವರಪ್ಪನವರಿಗೆ ಕೋಮು ವಿಷಯ ಬಿಟ್ಟು ಬೇರೆ ಬಂಡವಾಳವೇ ಇಲ್ಲ. ಧರ್ಮಗಳನ್ನು ಎಳೆದು ತಂದು ಯುವಕರ ಮನಸ್ಸನ್ನು ಹದಗೆಡಿಸಿ ಅಶಾಂತಿಯನ್ನು ಮೂಡಿಸಿ ಚುನಾವಣೆಗೆ ನಿಲ್ಲಲು ಹೊರಟಿದ್ದಾರೆ. ಅವರಿಗೆ ಚುನಾವಣೆಗೆ ನಿಲ್ಲಲು ಯಾವ ಯೋಗ್ಯತೆಯೂ ಇಲ್ಲ. ಶೇ. 40 ರಷ್ಟು ಭ್ರಷ್ಟಾಚಾರದ ಆರೋಪ ಹೊತ್ತು ಗುತ್ತಿಗೆದಾರನ ಸಾವಿಗೆ ಕಾರಣವಾಗಿ ಸಚಿವ ಸ್ಥಾನ ಕಳೆದುಕೊಂಡ ಈಶ್ವರಪ್ಪನವರಿಗೆ ನಾಚಿಕೆಯಾಗಬೇಕು. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಶೇ. 60 ರಷ್ಟು ಅವ್ಯವಹಾರ ನಡೆದರೂ ಕೂಡ ಎಲ್ಲವೂ ಸುಗಮವಾಗಿದೆ ಎಂದು ಹೇಳುವ ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕುಟುಕಿದರು.
ದೇಶ ಪ್ರೇಮ ಯಾವುದು ದೇಶ ದ್ರೋಹ ಯಾವುದು ಎಂಬ ವ್ಯತ್ಯಾಸವೇ ಅವರಿಗೆ ಗೊತ್ತಿಲ್ಲ. ವಿನಾಕಾರಣ ಕಾಂಗ್ರೆಸ್ ಬಗ್ಗೆ ಗೂಬೆ ಕೂರಿಸುವ ಅವರು ತಾವೇನು ಮಾಡಿದ್ದೇವೆ ಎಂದು ಯೋಚಿಸಲಿ. ಶಿವಮೊಗ್ಗ ನಗರದಲ್ಲಿ ಬರಿ ಗಲಾಟೆ, ದೊಂಬಿ, ಭ್ರಷ್ಟಾಚಾರ, ಅವ್ಯಹಾರಗಳನ್ನು ಅವ್ಯಾಹತವಾಗಿ ನಡೆಸಿಕೊಂಡು ಬಂದಿರುವ ಅವರಿಗೆ ಚುನಾವಣೆಗೆ ಸ್ಪರ್ಧಿಸುವ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದರು.
ಬಿ.ಎಸ್. ಯಡಿಯೂರಪ್ಪನವರು ಬಿಜೆಪಿಯನ್ನು ಕಟ್ಟಿ ಬೆಳೆಸಿದವರು. ಸ್ವಾಭಿಮಾನಿಯಾಗಿದ್ದವರು. ಅವರನ್ನು ಯಾವ್ಯಾವುದೋ ಕಾರಣಕ್ಕಾಗಿ ಮುಖ್ಯಮಂತ್ರಿ ಸ್ಥಾನವನ್ನು ಕಸಿದುಕೊಂಡವರು. ಅಂತಹ ಮಹಾನ್ ವ್ಯಕ್ತಿಗೆ ಬಿಜೆಪಿ ಅವಮಾನ ಮಾಡಿದೆ. ನಿಜವಾಗಿಯೂ ಯಡಿಯೂರಪ್ಪನವರಿಗೆ ಸ್ವಾಭಿಮಾನವಿದ್ದರೆ ಹಠವಾದಿಯೇ ಆಗಿದ್ದರೆ ಅವರು ಬಿಜೆಪಿ ಪರ ಭಾಷಣ ಮಾಡಬಾರದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್, ಪ್ರಮುಖರಾದ ಎಸ್.ಕೆ. ಮರಿಯಪ್ಪ, ಎಲ್. ಸತ್ಯನಾರಾಯಣ, ಎಸ್.ಪಿ. ದಿನೇಶ್, ರವಿಕುಮಾರ್, ಚಂದ್ರಶೇಖರ್, ಚಂದನ್, ಕಲೀಂ, ದೀಪಕ್ ಸಿಂಗ್, ನೇತಾಜಿ, ಶಿವಾನಂದ್, ಎನ್.ಡಿ. ಪ್ರವೀಣ್ ಮೊದಲಾದವರಿದ್ದರು.