ಶಿವಮೊಗ್ಗ : ಜಗದ ಎಲ್ಲಾ ರೋಗ ರುಜುನಗಳಿಗೆ ಶಿಕ್ಷಣವೇ ಮದ್ದು ಎಂದು ಕಿಯೊನಿಕ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರವಿ.ಡಿ.ಚನ್ನಣ್ಣನವರ್ ತಿಳಿಸಿದರು.

ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿದ್ಯುನ್ಮಾನ  ಅಭಿವೃದ್ಧಿ ನಿಗಮ, ಚಿರಾಗ್ ಇನ್ಫೊಟೆಕ್, ಎಂ.ಬಿ.ಎ ಮತ್ತು ಎಂ.ಸಿ.ಎ ವಿಭಾಗದ ವತಿಯಿಂದ ಏರ್ಪಡಿಸಿದ್ದ ಕಿಯೋನಿಕ್ಸ್ ಸಂಸ್ಥೆಯ ಉನ್ನತ ತರಬೇತಿ ಮಾಹಿತಿ‌ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸಮಯ ಮತ್ತು ಅವಕಾಶ ಬದುಕಿನಲ್ಲಿ ಅಮೂಲ್ಯವಾದದ್ದು. ಓದುವ ಸಮಯ, ಸಾಧಿಸುವ ಅವಕಾಶ ಸದಾ ಬದುಕಿನಲ್ಲಿ ಸಿಗುವುದಿಲ್ಲ. ಸಿಗುವ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ. ಜೀವನದಲ್ಲಿ ಏನೇ ಸಾಧನೆ ಸಾಧ್ಯವಾಗುತ್ತದೆ ಎಂದಾದರೇ ಅದು ನಮ್ಮ ಓದಿನ ಹಪಹಪಿಯಿಂದ ಮಾತ್ರ. ಹಿಂದೆ ಯಾಗಗಳ ಮೂಲಕ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಶಿಸಲಾಗುತ್ತಿತ್ತು. ಇಂದು ವಿದ್ಯೆಯ ಮೂಲಕ ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಯಾಗ ನಡೆಯುತ್ತಿದೆ.

ನಮ್ಮೂರಿನ ಹಳ್ಳಿಯ ಶಾಲೆಯಿಂದ ಪದವಿಗೆ ತಲುಪಲು ಸಾಧ್ಯವಾಗಿದ್ದು ಕೆಲವೇ ಕೆಲವರಿಗೆ ಮಾತ್ರ. ವಿದ್ಯಾರ್ಥಿಯಾಗುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಾಧಕನಾಗ ಬಯಸುವವರಿಗೆ ಜಗತ್ತನ್ನು ಸಂತೋಷ ಪಡುಸುವ ತೊಂದರೆ ಬೇಡ, ನಿಮ್ಮ ಆತ್ಮತೃಪ್ತಿಗಾಗಿ ಕೆಲಸ ಮಾಡಿ. ಅದಕ್ಕಾಗಿ ವಿವೇಕ ಚೂಡಾಮಣಿಯಂತಹ ಪುಸ್ತಕಗಳ ಅಧ್ಯಯನ ನಡೆಸಿ.

ನಮ್ಮ ಚಂದನವನ ಸದಾಚಾರಗಳ ಚಂದನವನವಾಗಿರಬೇಕು. ಆಂತರಿಕ ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ. ಉತ್ತಮ ವಿದ್ಯಾರ್ಥಿಯ ಪ್ರಮುಖ ಗುಣಲಕ್ಷಣಗಳೆಂದರೇ ಗ್ರಹಿಕೆ, ಕೇಳುವಿಕೆ ಮತ್ತು ಬರೆಯುವಿಕೆ. ಈ ಗುಣಲಕ್ಷಣಗಳೊಂದಿಗೆ ನಿರಂತರ ಕಲಿಕೆ ನಿಮ್ಮದಾಗಲಿ.

ಈ ಜಗತ್ತಿನಲ್ಲಿ ಪೋಲೀಸರಿಗೆ ಇರುವಷ್ಟು ಅವಕಾಶ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ. ಈ ಜಗತ್ತಿಗೆ ಶಾಂತಿಯ ಅವಶ್ಯಕತೆಯಿದೆ. ಅಂತಹ ಶಾಂತಿ ಮತ್ತು ಸುಭದ್ರತೆ ಕಾಪಾಡುವಲ್ಲಿ ಪೋಲೀಸರ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು.

ಎರಡನೇ ಜನ್ಮ ಕೊಟ್ಟ ಶಿವಮೊಗ್ಗ :

ಇಡೀ ಕರ್ನಾಟಕಕ್ಕೆ ರವಿ ಚನ್ನಣ್ಣನವರ್ ಯಾರು ಎಂದು ಪರಿಚಯಿಸಿದ್ದು ಶಿವಮೊಗ್ಗ ಜಿಲ್ಲೆ. ಇಲ್ಲಿ ಕೆಲಸ ಮಾಡಿದ ಪ್ರತಿ ದಿನವೂ ಸಂಭ್ರಮವೇ ಆಗಿತ್ತು. ಶಿವಮೊಗ್ಗ ಜಿಲ್ಲೆ ನನಗೆ ಎರಡನೇ ಜನ್ಮ ಕೊಟ್ಟ ಪುಣ್ಯ ಭೂಮಿ ಎಂದು ಸ್ಮರಿಸಿದರು.

ಕಿಯೋನಿಕ್ಸ್ ನಿಂದ ವಿವಿಧ ಕೋರ್ಸ್ :

ಕಿಯೊನಿಕ್ಸ್ ಸಂಸ್ಥೆಯಿಂದ ಐಐಟಿ ಐಐಎಂ ಪ್ರೊಫೆಸರ್‌ ಗಳಿಂದ ಕೃತಕ ಬುದ್ಧಿಮತ್ತೆ, ಐಓಟಿ, ಸೈಬರ್ ಸೆಕ್ಯುರಿಟಿ ಸೇರಿದಂತೆ ಅನೇಕ ತಾಂತ್ರಿಕ ಉನ್ನತ ಕೋರ್ಸ್‌ಗಳನ್ನು ಒದಗಿಸುತ್ತಿದೆ. ಜೊತೆಗೆ ಉನ್ನತ ಉದ್ಯೋಗವಕಾಶಗಳನ್ನು ಕೋರ್ಸ್ ಮುಗಿಸಿದ ವಿದ್ಯಾರ್ಥಿಗೆ ನೀಡಲಾಗುತ್ತದೆ. ಈ ಮೂಲಕ ಸಾಮಾನ್ಯ ಮತ್ತು ಗ್ರಾಮೀಣ ಪ್ರದೇಶದ ಯುವ ಸಮೂಹದ ಸಬಲೀಕರಣ ಸಾಧ್ಯವಾಗಲಿದೆ. ಕಿಯೋನಿಕ್ಸ್ ಪೂರಕ ವೇದಿಕೆಗಳನ್ನು ಬಳಸಿಕೊಳ್ಳಿ

————————

ಕಾರ್ಯಕ್ರಮದಲ್ಲಿ ಕಿಯೋನಿಕ್ಸ್ ಸಂಸ್ಥೆಯ ಆಯೋಜಕ ನಿರ್ದೇಶಕರಾದ ಕುಮಾರ್.ಪಿ, ಕೋರ್ಸ್ ನಿರ್ದೇಶಕರಾದ ಡಾ.ಸರೀತ್ ಕುಮಾರ್, ಜೆ.ಎನ್.ಎನ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರಪ್ರಸಾದ್, ಡಿವೈಎಸ್ಪಿ ಸುರೇಶ್, ಚಿರಾಗ್ ಇನ್ಫೊಟೆಕ್ ಗಿರೀಶ್.ಡಿ.ಪಿ, ಎಂಸಿಎ ವಿಭಾಗದ ನಿರ್ದೇಶಕರಾದ ಡಾ.ಪ್ರಭುದೇವ, ಎಂಬಿಎ ವಿಭಾಗದ ನಿರ್ದೇಶಕರಾದ ಡಾ.ಶ್ರೀಕಾಂತ್, ಸಹ ಪ್ರಾಧ್ಯಾಪಕರಾದ ಪ್ರಶಾಂತ್ ಅಂಕಲಕೋಟಿ, ವಿಕ್ರಮ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!