ಶಾಸಕ ಕೆ.ಎಸ್. ಈಶ್ವರಪ್ಪ ಅವರು ವಿವೇಕಶೂನ್ಯರಾಗಿದ್ದಾರೆ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶೇ.೪೦ರಷ್ಟರ ಕಮಿಷನ್ ಹಣದ ಆರೋಪ ಹೊತ್ತು ಸಚಿವ ಪಟ್ಟ ಕಳೆದುಕೊಂಡ ಈಶ್ವರಪ್ಪ ಸಿದ್ದರಾಮಯ್ಯ ಅವರ ಹೆಣದ ಬಗ್ಗೆ ಮಾತನಾಡಿ, ತಮ್ಮ ವ್ಯಕ್ತಿತ್ವಕ್ಕೆ ತಾವೇ ಮಸಿ ಬಳಿದುಕೊಂಡಿದ್ದಾರೆ.

ಸಿದ್ದರಾಮಯ್ಯ ಅವರ ಹೆಣವನ್ನು ನಾಯಿಯೂ ಮೂಸುವುದಿಲ್ಲ ಎಂದು ಹೇಳುವ ಮೂಲಕ ತಮ್ಮ ರಾಜಕೀಯ ಬದುಕಿಗೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ ಎಂದರು.
ಸಿದ್ದರಾಮಯ್ಯ ಅವರಂತಹ ನಾಯಕನನ್ನು ಟೀಕಿಸುವುದಕ್ಕೂ ಒಂದು ವ್ಯಕ್ತಿತ್ವ ಬೇಕು. ಈಶ್ವರಪ್ಪನವರಿಗೆ ಅಂತಹ ವ್ಯಕ್ತಿತ್ವ ಯಾವುದೂ ಇಲ್ಲ. ವ್ಯಕ್ತಿನಿಂದನೆ ಮಾಡಿ ಮತವನ್ನು ಗಳಿಸಬಹುದು ಎಂಬುದು ಅವರ ಭ್ರಮೆ ಅಷ್ಟೆ. ಅವರು ಹೀಗೆ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಇಂತಹ ಮಾತುಗಳನ್ನಡಿ ಕ್ಷಮೆ ಕೇಳಿದ್ದೂ ಇದೆ. ಅಸಾಂವಿಧಾನಿಕವಾಗಿ ಮಾತನಾಡಿ, ನಾಲಿಗೆಗೆ ಎಲುಬಿಲ್ಲ ಎಂಬುದನ್ನು ಅವರೇ ಸಾಬೀತು ಮಾಡಿದ್ದಾರೆ ಎಂದರು.


ರಾಜ್ಯ ಬಿಜೆಪಿಯ ಇತರೆ ನಾಯಕರು ಒಂದು ರೀತಿಯದಾದರೆ ಈಶ್ವರಪ್ಪನವರದ್ದು ಮತ್ತೊಂದು ರೀತಿ. ಅಭಿವೃದ್ಧಿಯನ್ನೆ ಮಾಡದ ಅವರು, ಮತದಾರರ ಬಳಿಗೆ ಹೋಗಲು ಇಂತಹ ನಿಂದನೆಯ ಮಾತುಗಳನ್ನು ಆಡುತ್ತಿದ್ದಾರೆ. ಶಿವಮೊಗ್ಗ ಕ್ಷೇತ್ರ ಬಿಟ್ಟು ಅವರಿಗೆ ಬೇರೆ ಯಾವ ಕ್ಷೇತ್ರವೂ ಇಲ್ಲ. ಸಿದ್ದರಾಮಯ್ಯ ಅವರಿಗೆ ಮಾತ್ರ ಪದೆಪದೆ ಕ್ಷೇತ್ರವಿಲ್ಲ ಎಂದು ಹೇಳುತ್ತಿದ್ದಾರೆ. ಇವರು ಶಿವಮೊಗ್ಗ ಕ್ಷೇತ್ರ ಬಿಟ್ಟು ಬೇರೆ ಕಡೆ ಸ್ಪರ್ಧಿಸಿ ಗೆಲ್ಲಲಿ ಎಂದರು.


ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪಧಿಸಲು ಇಚ್ಛಿಸುವ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ ಎಂಬುದು ನಿಜ. ಆದರೆ ಇದುವರೆಗೂ ಯಾರ ಹೆಸರೂ ಅಂತಿಮವಾಗಿಲ್ಲ. ನನಗೆ ತಿಳಿದಿರುವ ಮಟ್ಟಿಗೆ ಮೂರು ಜನ ಆಕಾಂಕ್ಷಿಗಳ ಪಟ್ಟಿಯೂ ಹೋಗಿಲ್ಲ. ಫೆ.೮ರಂದು ಶಿವಮೊಗ್ಗ ಜಿಲ್ಲೆಗೆ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಬರಲಿದ್ದಾರೆ. ಅವರೂ ಸಮೀಕ್ಷೆ ಮಾಡುತ್ತಾರೆ. ಅಭ್ಯರ್ಥಿಗಳ ಆಯ್ಕೆಗಾಗಿಯೇ ೫೪ ಜನರ ಸಮಿತಿ ರಚಿಸಲಾಗಿದೆ. ಅವರು ತೀರ್ಮಾನ ಮಾಡುತ್ತಾರೆ. ಯಾರಿಗೇ ಟಿಕೆಟ್ ಸಿಕ್ಕರೂ ಕೂಡ ಪಕ್ಷದ ಪರವಾಗಿಯೇ ಕೆಲಸ ಮಾಡುತ್ತೇವೆ. ಈ ಬಾರಿಯ ಚುನಾವಣೆ ಕಾಂಗ್ರೆಸ್ ಪರವಾಗಿ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಘವೇಂದ್ರ ನಾಯ್ಕ, ರುದ್ರೇಶ್ ಹೆಚ್.ಪಿ. ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!