ಶಿವಮೊಗ್ಗ : ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಸಿದ ಸಚಿವರು, ಜಿಲ್ಲೆಯ ರಸ್ತೆ ಅಭಿವೃದ್ದಿ ಕಾಮಗಾರಿಗಳ ಮಾಹಿತಿ ಪಡೆದರು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಬೋಜನಾಯಕ್ ಮಾತನಾಡಿ, ಜಿಲ್ಲೆಯಲ್ಲಿ ಗಣಿಗಾರಿಕೆ ಪ್ರದೇಶಗಳಲ್ಲಿ ಪರ್ಮಿಷನ್ ಕೊಟ್ಟಿಲ್ಲ. ಮಳೆಗಾಲದಲ್ಲಿ ಮರಳು ಪರವಾನಿಗೆ ನೀಡಿಲ್ಲ. ಈಗ ಯಾವ ಮಳೆಗಾಲವಿದೆ ಎಂದು ಪ್ರಶ್ನಿಸಿದರು.
ಸಾರ್ವಜನಿಕರಿಗೆ ಮರಳು ಸಮರ್ಪಕವಾಗಿ ದೊರಕದೆ ಸಾಕಷ್ಟು ಸಮಸ್ಯೆ ಉದ್ಭವಿಸಿದೆ. ಮಳೆಗಾಲ ಇಲ್ಲದಿದ್ದರೂ ಪರವಾಗಿಲ್ಲ ಏಕೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈಗೆಲ್ಲಿ ಮಳೆ ಇದೇರಿ ಎಂದು ಪ್ರಶ್ನಿಸಿದ ಅವರು, ಮಳೆಗಾಲದಲ್ಲಿ ನೀಡುವ ಉತ್ತರ ಈಗ ನೀಡಿದರೆ ಹೇಗೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಸೊರಬ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಗರಂ ಆದರು. ಸೊರಬ ಶಾಸಕರ ವಿರುದ್ಧ ನಿನ್ನೆ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಸರ್ವ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಅಸಮಧಾನ ವ್ಯಕ್ತಪಡಿಸಿದರು.
ಇದಕ್ಕೆ ಡಿಸಿ ಹೇಗೆ ಅವಕಾಶ ಕೊಟ್ಟರು ಅದಕ್ಕೆ ಉತ್ತರ ಕೊಡಬೇಕು. ವಿನಾಕಾರಣ ನನ್ನ ವಿರುದ್ಧ ಪಿತೂರಿ ನಡೆದಿದೆ. ಇದು ರಾಜಕೀಯ ಪ್ರೇರಿತವಾಗಿದೆ ಎಂದು ಕುಮಾರ್ ಬಂಗಾರಪ್ಪ ಸಭೆಯಲ್ಲಿ ಆರೋಪಿಸಿದರು.
ಸೊರಬದಲ್ಲಿ 14 ಮಂದಿ ತಹಶೀಲ್ದಾರರ ವರ್ಗಾವಣೆಯಾಗಿದೆ ಎಂದು ಅಪಪ್ರಚಾರ ನಡೆಸಲಾಗಿದೆ. ಡಿಸಿ ಡಾ. ಸೆಲ್ವಮಣಿ ಅವರೇ ವರ್ಗಾವಣೆ ಮಾಡಿರುವ ದಾಖಲೆ ಕೊಡಿ. ನನ್ನ ಅವಧಿಯಲ್ಲಿ ತಹಶೀಲ್ದಾರರ ವರ್ಗಾವಣೆಯಾಗಿರುವ ಬಗ್ಗೆ ಪಟ್ಟಿ ಕೊಡಿ ಎಂದು ಶಾಸಕ ಕುಮಾರ್ ಬಂಗಾರಪ್ಪ ಜಿಲ್ಲಾಧಿಕಾರಿಗಳಲ್ಲೂ ಪ್ರಶ್ನಿಸಿದರು.
ಡಿಸಿ ಅವರನ್ನು ತರಾಟೆಗೆ ತೆಗೆದುಕೊಂಡ ಕುಮಾರ ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವರು ಈ ಕುರಿತು ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ್, ರುದ್ರೇಗೌಡ, ಡಿಸಿ ಸೆಲ್ವಮಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.