ವಿಮಾನ ನಿಲ್ದಾಣದ ಉದ್ಘಾಟನೆ

ಶಿವಮೊಗ್ಗ, ಜನವರಿ, 21:

ಶಿವಮೊಗ್ಗದ ಸೋಗಾನೆ ಬಳಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಫೆಬ್ರವರಿ 12ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಕಾರಣಂತರಗಳಿಂದ ವಿಮಾನ ನಿಲ್ದಾಣದ ಉದ್ಘಾಟನೆಯ ದಿನಾಂಕವನ್ನು ಮುಂದೂಡಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣವನ್ನು ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಶಿವಮೊಗ್ಗದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ವಿಮಾನ ನಿಲ್ದಾಣ ಉದ್ಘಾಟನೆಯ ನಂತರ ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಹಾರಾಟ ಪ್ರಾರಂಭವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣ ಕಾಮಗಾರಿಯನ್ನು ಯಡಿಯೂರಪ್ಪ ಮತ್ತು ಅವರ ಮಗ ಬಿ.ವೈ. ರಾಘವೇಂದ್ರ ಪರಿಶೀಲಿಸಿದರು.

ಈ ಬಗ್ಗೆ ಮಾತನಾಡಿದ ಯಡಿಯೂರಪ್ಪ, ವಿಮಾನ ನಿಲ್ದಾಣ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಇದು ರಾಜ್ಯದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಅತಿ ದೊಡ್ಡ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಕಾರಣವಾಗಲಿದೆ. ಈ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದೇನೆ. ಫೆಬ್ರವರಿ 27 ರಂದು ಅವರು ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಒಟ್ಟು ವೆಚ್ಚದ ವಿವರ
ಈ ವಿಮಾನ ನಿಲ್ದಾಣವನ್ನು ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣವು ಕನಿಷ್ಠ ವೆಚ್ಚದಲ್ಲಿ ನಿರ್ಮಿಸಿದ ದೇಶದ ಮೊದಲ ವಿಮಾನ ನಿಲ್ದಾಣವಾಗಿದೆ. ಇಲ್ಲಿ ವಿಮಾನಗಳು ರಾತ್ರಿ ಇಳಿಯುವಂತಹ ಸುಧಾರಿತ ಸೌಲಭ್ಯಗಳನ್ನು ಹೊಂದಿರುತ್ತದೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಉದ್ಘಾಟನೆ ಬಳಿಕ ಕಾರ್ಯಾಚರಣೆ ಆರಂಭ
ಇನ್ನು ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಹಲವು ವಿಮಾನ ನಿಲ್ದಾಣಗಳು ಉದ್ಘಾಟನೆಗೊಂಡ 2-3 ವರ್ಷಗಳ ನಂತರ ಕಾರ್ಯಾಚರಣೆ ಆರಂಭಿಸಿವೆ. ಈ ವಿಮಾನ ನಿಲ್ದಾಣ ಉದ್ಘಾಟನೆಯಾದ ತಕ್ಷಣ ಕಾರ್ಯಾಚರಣೆ ಆರಂಭಿಸಲಿದೆ ಎಂದು ಮಾಹಿತಿ ನೀಡಿದರು. ಹಾಗೆಯೇ ಸ್ಟಾರ್ ಏರ್ ಕಾರ್ಯನಿರ್ವಹಿಸಲು ಮುಂದೆ ಬಂದಿದೆ. ನಾವು ಇತರ ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಮೊದಲ ವಿಮಾನ ಕಾರ್ಯಾಚರಣೆ ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಆರಂಭವಾಗಲಿದೆ. ಪ್ರಧಾನಿ ಮೋದಿಯವರ ವಿಮಾನವು ಮೊದಲು ಇಲ್ಲಿ ಇಳಿಯಬೇಕು ಎಂದು ಬಯಸುತ್ತೇವೆ ಎಂದು ಹೇಳಿದರು.

500 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಲ್ಲಿ 3.50 ಕಿಲೋ ಮೀಟರ್‌ ರನ್‌ ವೇ, ಕಾಂಪೌಂಡ್‌, ಕಾಂಪೌಂಡ್‌ಗೆ ಹೊಂದಿಕೊಂಡಂತೆ ರಸ್ತೆಗಳು, ನಿಲ್ದಾಣಕ್ಕೆ ಒಂದು ಕಿಲೋ ಮೀಟರ್‌ ಸಂಪರ್ಕ ರಸ್ತೆ, ವಿಮಾನಗಳು ನಿಲುಗಡೆ ಆಗುವಂತಹ ಏಪ್ರಾನ್‌, 100 ಕೆ.ವಿ. ಸಾಮಥ್ಯದ ಸೋಲಾರ್‌ ವಿದ್ಯುತ್‌ ಉತ್ಪಾದನಾ ಘಟಕ, ಉಪ ವಿದ್ಯುತ್‌ ಘಟಕ, ಕೊಳಚೆ ನೀರು ಶುದ್ಧೀಕರಣ ಘಟಕ ಇರಲಿವೆ.(ಸಂ)

By admin

ನಿಮ್ಮದೊಂದು ಉತ್ತರ

error: Content is protected !!