ರಾಜ್ಯದ ಮೂರು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್
ಶಿವಮೊಗ್ಗ, ಜ.೧೬:
ಶಿವಮೊಗ್ಗ ಜಿಲ್ಲೆಯಲ್ಲಿ ಈ ಭಾರಿ ಪ್ರಮಾಣದಲ್ಲಿ ಚಳಿ ಕಾಣಿಸಿಕೊಳ್ಳುತ್ತಿದ್ದು, ಈ ಚಳಿಗೆ ನಗರದ ಜನತೆ ತತ್ತರಿಸಿದ್ದಾರೆ.
ಚಳಿಯ ರಭಸಕ್ಕೆ ನಗರದಲ್ಲಿ ವಾಕಿಂಗ್, ಜಿಮ್, ವಾಯುವಿಹಾರಕ್ಕೆ ಬರುತ್ತಿದ್ದವರ ಸಂಖ್ಯೆ ತೀರಾ ಕಡಿಮೆಯಾಗುತ್ತಿದೆ. ರಾತ್ರಿ ಮಲಗಿದರೆ ಬೆಳಗ್ಗೆ ಹಾಸಿಗೆ ಬಿಟ್ಟೇಳಲಾರದಷ್ಟು ಚಳಿ.
ಇನ್ನೊಂದೆಡೆ ಮುಂಜಾನೆ ಎದ್ದು ತಕರಾರಿ, ಹೂವು ಹಾಗೂ ಪೇಪರ್, ಹಾಲು ವಿತರಿಸುವ ಹುಡುಗರು ಚಳಿಗೆ ರಸ್ತೆಯ ಅಕ್ಕಪಕ್ಕದಲ್ಲೇ ಬೆಂಕಿ ಕಾಯಿಸಿಕೊಳ್ಳುವು ದೃಶ್ಯವನ್ನು ಕಾಣಬಹುದು. ನಗರದಲ್ಲಿ ನಾಲ್ಕು ದಿನಗಳ ಹಿಂದೆ ಇದ್ದ ಚಳಿ ಇಂದು ಸ್ವಲ್ಪ ಕಡಿಮೆಯಾದರೂ ಸಹ ೧೦ ಗಂಟೆಯವರೆಗೂ ಮಂಜು ದಟ್ಟವಾಗಿಯೇ ಇತ್ತು.
ಚಳಿಯ ದೇಹವನ್ನು ರಕ್ಷಿಸಿಕೊಳ್ಳಲು ಟೋಪಿ, ಸ್ವಟರ್, ಗ್ಲೌಸ್ ಹಾಕಿಕೊಂಡು ಫುಲ್ ಪ್ಯಾಕ್ ಆಗಿ ಮನೆಯಿಂದ ಹೊರಬರುತ್ತಿರುವುದನ್ನು ಕಾಣಬಹುದು. ಈ ಚಳಿಗೆ ಕೈ ಕಾಲು, ತುಟಿ, ಚರ್ಮ ಬಿರಿಯುತ್ತಿದ್ದು, ಇದರ ರಕ್ಷಣೆಗೆ ಹಲವು ಕ್ರಿಮ್ಗಳ ಮೊರೆ ಹೋಗಿದ್ದಾರೆ.
ರಾಜ್ಯದ ಮೂರು ಜಿಲ್ಲೆಗಳಲ್ಲಿ ಹೆಚ್ಚು ಚಳಿ ಕಾಡಿಸಲಿದೆ ಎಂಬುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಅದರಲ್ಲೂ ಬಾಗಲಕೋಟೆ, ವಿಜಯಪುರ ಮತ್ತು ಮೈಸೂರು ಜಿಲ್ಲೆಯಲ್ಲಿ ಚಳಿ ಮತ್ತಷ್ಟು ಹೆಚ್ಚಾಗಲಿದ್ದು ಯೆಲ್ಲೋ ಅಲರ್ಟ್ ಘೋಷಿಸಿದೆ. ವಿಜಯಪುರದಲ್ಲಿ ೯.೮ ಡಿಗ್ರಿ, ಮೈಸೂರು ೯.೪ ಡಿಗ್ರಿ ಹಾಗೂ ಬಾಗಲಕೋಟೆಯಲ್ಲಿ ೮.೨ ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ. ಶಿವಮೊಗ್ಗದಲ್ಲಿ ಉಷ್ಣಾಂಶವು ೧೮ ಡಿಗ್ರಿಗೆ ಕುಸಿದಿದ್ದು, ಮದ್ಯಾಹ್ನ ೧೨ರ ಹೊತ್ತಿಗೆ ೩೦ ಡಿಗ್ರಿ ಏರಿಕೆಯಾಗಿತ್ತು.
ಚಳಿಗೆ ಹೆಚ್ಚಿದ ಶೀತ-ಕೆಮ್ಮು : ಚಳಿಗೆ ಸಾಮಾನ್ಯವಾಗಿ ನೆಗಡಿ, ಗಂಟಲು ನೋವು, ಕಿವಿನೋವು, ಜ್ವರದಂತಹ ಕಾಯಿಲೆಗಳು ಮಕ್ಕಳಿಗೆ ಹಾಗೂ ಪೋಷಕರಿಗೆ ಕಾಣಿಸಿಕೊಳ್ಳುತ್ತಿವೆ. ಮಧುಮೇಹ ಹಾಗೂ ಹೃದ್ರೋಗ, ಸ್ಟ್ರೋಕ್ನಿಂದ ಬಳಲುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ.