ಶಿವಮೊಗ್ಗ: ಕಲ್ಲಹಳ್ಳಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಮಕರ ಸಂಕ್ರಾಂತಿ ಆಚರಿಸಲಾಯಿತು.
ಶಾಲೆಯ ಮಕ್ಕಳು, ಶಿಕ್ಷಕರು ಸಂಕ್ರಾಂತಿ ಹಬ್ಬದ ಅಂಗವಾಗಿ ಚಿತ್ತಾರ ಬಿಡಿಸಿ ಕಬ್ಬಿನ ಕೋಲುಗಳ ಶೃಂಗರಿಸಿ, ಎಳ್ಳು ಬೆಲ್ಲ ಹಂಚಿ ನೃತ್ಯಗಳ ಮೂಲಕ ಹಬ್ಬವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ, ಶಾಲೆಯ ಮುಖ್ಯೋಪಾಧ್ಯಾಯಿನಿ ಸುನಿತಾದೇವಿ, ಸಂಕ್ರಾಂತಿ ಒಂದು ವಿಶಿಷ್ಟವಾದ ಹಬ್ಬ. ಚಳಿಯನ್ನು ಕೊಂದು ವಸಂತನನ್ನು ಸ್ವಾಗತಿಸುವ ಕಾಲದಲ್ಲಿ ಈ ಹಬ್ಬ ಬರುತ್ತದೆ. ಹಳೆಯ ಕೆಟ್ಟ ನೆನಪುಗಳು ಮರೆಯಾಗಲಿ ಎಂಬುದೇ ಇದರ ಉದ್ದೇಶವಾಗಿದೆ. ಎಳ್ಳು, ಬೆಲ್ಲ ಹಂಚುವುದು ಕೂಡ ವೈಜ್ಞಾನಿಕವಾಗಿದೆ. ಎಳ್ಳು, ಬೆಲ್ಲದಲ್ಲಿ ಆರೋಗ್ಯದ ಗುಣಗಳಿವೆ ಎಂದರು.
ಮಕರ ಸಂಕ್ರಾಂತಿ ಶಾಂತಿ, ತಾಳ್ಮೆ, ಸಹನೆ ಕಲಿಸುತ್ತದೆ. ಮಕ್ಕಳಲ್ಲಿ ಕ್ರಿಯಾಶೀಲತೆ ಬೆಳೆಸುತ್ತದೆ. ಎಲ್ಲಾ ಶಾಲೆಗಳಲ್ಲಿಯೂ ಎಲ್ಲಾ ಹಬ್ಬಗಳನ್ನು ಆಚರಿಸಿದರೆ ಮಕ್ಕಳಿಗೆ ಹಬ್ಬದ ಮಹತ್ವ ತಿಳೀಯುತ್ತದೆ. ಸಂಕ್ರಾಂತಿ ಕೂಡ ರೈತರ ಹಬ್ಬವಾಗಿದ್ದು, ಇದು ಸಮೃದ್ಧಿಯ ಸಂಕೇತವಾಗಿದೆ. ಮಕ್ಕಳು ವಿದ್ಯಾಭ್ಯಾಸದ ಮೂಲಕ ಸಮೃದ್ಧಿ ಹೊಂದಲಿ ಎಂದರು.
ಸಂಸ್ಥೆಯ ಕಾರ್ಯದರ್ಶಿ ಎನ್. ರಮೇಶ್ ಮಾತನಾಡಿ, ಭಾರತ ಹಬ್ಬಗಳ ತವರೂರು. ಇಲ್ಲಿ ಎಲ್ಲಾ ಧರ್ಮದವರೂ ಇದ್ದಾರೆ. ಹಬ್ಬಗಳೇ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಈ ಹಬ್ಬದ ಮಹತ್ವವವನ್ನು ಮಕ್ಕಳಲ್ಲಿ ಮೂಡಿಸಿವುದು ಕೂಡ ಮುಖ್ಯವಾಗಿದೆ. ಜಾತಿ ಧರ್ಮಗಳನ್ನು ಮೀರಿ ಮನುಷ್ಯತ್ವವನ್ನು ಸಾರುವುದೇ ಹಬ್ಬದ ಮಹತ್ವವಾಗಿದೆ. ನಮ್ಮ ಶಾಲೆಯಲ್ಲಿ ಎಲ್ಲಾ ಹಬ್ಬಗಳನ್ನು ಆಚರಿಸುವ ಮೂಲಕ ಮಕ್ಕಳಲ್ಲಿ ಸಾಮರಸ್ಯ ಮೂಡಿಸುತ್ತೇವೆ ಎಂದರು.
7 ನೇ ತರಗತಿ ಮಕ್ಕಳು ಸ್ವಾಗತ ಗೀತೆ ಹಾಡಿದರು. ಭಾವನಾ ಸ್ವಾಗತಿಸಿದರು. ಶಾಲೆಯ ಶಿಕ್ಷಕರು, ಪೋಷಕರು ಇದ್ದರು.