ಹೊಸದಿಲ್ಲಿ,ಜ.06:
ಆಧಾರ್ ಬಳಕೆದಾರರು ತಮ್ಮ ಆಧಾರ್ ಕಾರ್ಡ್’ಗಳಲ್ಲಿನ ವಿಳಾಸವನ್ನು ಪರಿಷ್ಕರಿಸಲು ಅಥವಾ ಬದಲಿಸಲು ಹೊಸ ಪ್ರಕ್ರಿಯೆಯನ್ನು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಪರಿಚಯಿಸಿದೆ.
ಈವರೆಗೂ ವಿಳಾಸ ಬದಲಾವಣೆ ಪ್ರಕ್ರಿಯೆಗಾಗಿ ಯುಐಡಿಎಐಗೆ ಹೊಸ ವಿಳಾಸದ ಪುರಾವೆಯನ್ನು ಅಪ್ಲೋಡ್ ಮಾಡಬೇಕಿತ್ತು. ಆದರೆ ಇನ್ನು ಮುಂದೆ ಯಾವುದೇ ರೀತಿಯ ದಾಖಲೆಗಳನ್ನು ತೋರಿಸದೆಯೇ ವಿಳಾಸವನ್ನು ಸುಲಭವಾಗಿ ಪರಿಷ್ಕರಿಸಲು ಅಥವಾ ಬದಲಾಯಿಸಲು ಅವಕಾಶ ನೀಡಲಾಗಿದೆ.
ಕುಟುಂಬ ಮುಖ್ಯಸ್ಥರ ಸಮ್ಮತಿಯೊಂದಿಗೆ ಸದಸ್ಯರು ತಮ್ಮ ಆಧಾರ್ ಕಾರ್ಡ್ನಲ್ಲಿನ ವಿಳಾಸವನ್ನು ಮಾರ್ಪಡಿಸಲು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಅವಕಾಶ ಮಾಡಿಕೊಟ್ಟಿದೆ.
ಹೊಸ ವ್ಯವಸ್ಥೆ ಅಡಿಯಲ್ಲಿ ವಿಳಾಸ ಬದಲಾವಣೆಗೆ ಇಚ್ಛಿಸುವವರು ಮೊದಲು ಕುಟುಂಬದೊಂದಿಗಿನ ಸಂಬಂಧ (ಪತ್ನಿ, ಮಗ, ಸೊಸೆ, ಮಗಳು , ಇತರ) ಕುರಿತು ಸೂಕ್ತ ದಾಖಲೆಗಳ ಪ್ರತಿಯನ್ನು ವೆಬ್ ಸೈಟ್ ಗೆ ಅಪ್ಲೋಡ್ ಮಾಡಬೇಕು. ಬಳಿಕ ಕುಟುಂಬ ಮುಖ್ಯಸ್ಥರ (ಹೆಡ್ ಆಫ್ ಫ್ಯಾಮಿಲಿ) ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ‘ಒಟಿಪಿ’ ಬಳಸಿ ಸದಸ್ಯರು ತಮ್ಮ ಕಾರ್ಡ್ ನಲ್ಲಿ ವಿಳಾಸವನ್ನು ಮಾರ್ಪಡಿಸಬಹುದಾಗಿದೆ. ಸಂಬಂಧ ದೃಢೀಕರಣಕ್ಕಾಗಿ ರೇಷನ್ ಕಾರ್ಡ್, ಮ್ಯಾರೇಜ್ ಸರ್ಟಿಫಿಕೇಟ್, ಪಾಸ್ಪೋರ್ಟ್ ಇತರ ದಾಖಲೆಗಳನ್ನು ನೀಡಬಹುದಾಗಿದೆ.
ಒಂದು ವೇಳೆ ಕುಟುಂಬ ಮುಖ್ಯಸ್ಥರ ಜತೆಗೆ ಸಂಬಂಧ ಸಾಬೀತಿಗೆ ಅಧಿಕೃತ ದಾಖಲೆಗಳು ಲಭ್ಯವಿಲ್ಲದಿದ್ದಲ್ಲಿ, ಅಂಥವರು ಕುಟುಂಬ ಮುಖ್ಯಸ್ಥರಿಂದ ‘ಸ್ವಯಂ ದೃಢೀಕರಣ ಪತ್ರ’ ವನ್ನು (ಯುಐಡಿಎಐ ವೆಬ್ ಸೈಟ್ ನಲ್ಲಿ ನಮೂದಿಸಿರುವ ಮಾದರಿಯಲ್ಲಿ) ಪಡೆದು ಸಲ್ಲಿಸಿದರೆ ಸೂಕ್ತ ದಾಖಲೆಯಾಗಿ ಪರಿಗಣಿಸಲಾಗುವುದು ಎಂದು ಆಧಾರ್ ಪ್ರಾಧಿಕಾರ ಪ್ರಕಟಣೆ ತಿಳಿಸಿದೆ.