ಯಾವುದೇ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗದಂತೆ ಪಂಚಮಸಾಲಿ ಮತ್ತು ಒಕ್ಕಲಿಗರಿಗೆ ಮೀಸಲಾತಿ ನೀಡುವ ಪ್ರಯತ್ನ ನಡೆದಿದೆ. ಈ ಹಿನ್ನಲೆಯಲ್ಲಿಯೇ ಅವರಿಗೆ 2 ಡಿ, 2 ಸಿ ಅಡಿಯಲ್ಲಿ ಮೀಸಲಾತಿ ಕಲ್ಪಿಸಲು ಸಂಪುಟಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಮೀಸಲಾತಿಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಪಂಚಮಸಾಲಿಗೆ 2ಎ ಮೀಸಲಾತಿ ಕೊಡಬೇಕು ಎಂಬುದು ಅವರ ಅಪೇಕ್ಷೆಯಾಗಿತ್ತು. 2ಎ ಗೆ ಸೇರಿಸಿದ್ರೇ 102 ಹಿಂದುಳಿದ ಜಾತಿಗೆ ಅನ್ಯಾಯವಾಗುತ್ತೆ ಎಂಬುದು ಎಲ್ಲರ ಅಭಿಪ್ರಾಯ. ನನ್ನ ಅಭಿಪ್ರಾಯ ಕೂಡ ಅದೇ ಆಗಿತ್ತು. ಪಂಚಮಸಾಲಿಗೆ ಮೀಸಲಾತಿ ಕೊಡಲು ಸಾಕಷ್ಟು ಚರ್ಚೆ ಮಾಡಿ ಇದೀಗ ಕ್ರಮ ಕೈಗೊಳ್ಳಲಾಗಿದೆ ಎಂದರು.
ಒಕ್ಕಲಿಗರಿಗೆ 2ಸಿ, ಪಂಚಮಸಾಲಿಗೆ 2ಡಿ ಕೊಡಲು ಕ್ಯಾಬಿನೆಟ್ ನಲ್ಲಿ ತೀರ್ಮಾನಿಸಿದೆ. ಈಗಿರುವ ಮೀಸಲಾತಿಗೆ ಇನ್ನೆಷ್ಟು ಪರ್ಸೆಂಟೇಜ್ ಸೇರಿಸಬೇಕು ಎಂದು ಚರ್ಚೆ ಆಗ್ತಿದೆ. ಮೀಸಲಾತಿ ವಿಚಾರದಲ್ಲಿ ಇದು ಸರ್ಕಾರದ ಮೊದಲ ಹೆಜ್ಜೆ. ಹಿಂದುಳಿದ ಜಾತಿಗಳಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಬಾರದು. ಪಂಚಮಸಾಲಿ ಮತ್ತು ಒಕ್ಕಲಿಗರಿಗೂ ಕೂಡ ನ್ಯಾಯ ಸಿಗಬೇಕು. ಸರ್ಕಾರದ ಮೊದಲ ಹೆಜ್ಜೆಯನ್ನು ಎಲ್ಲರೂ ಕೂಡ ಸ್ವಾಗತಿಸಿದ್ದಾರೆ ಎಂದರು.
ಈ ಕುಮಾರಸ್ವಾಮಿ ಯಾಕೆ ಸ್ವಾಗತ ಮಾಡುತ್ತಿಲ್ಲವೋ ನನಗಂತೂ ಗೊತ್ತಿಲ್ಲ. ಪಂಚಮಸಾಲಿ ಸಮುದಾಯ ಕೂಡ ವಿರೋಧ ಮಾಡಿಲ್ಲ. ಜೊತೆಗೆ ಸಂಭ್ರಮವನ್ನು ಪಟ್ಟಿಲ್ಲ. ಮೀಸಲಾತಿ ಅಂತಿಮಗೊಂಡ ಬಳಿಕ ಅವರು ಸಂತೃಪ್ತಗೊಳ್ತಾರೆ ನನಗೆ ವಿಶ್ವಾಸ ಇದೆ. ಮೀಸಲಾತಿ ನೀಡಲು ಜೆಡಿಎಸ್- ಕಾಂಗ್ರೆಸ್ ಕೂಡ ನಮಗೆ ಸಹಕಾರ ನೀಡಬೇಕು. ಕುಮಾರಸ್ವಾಮಿ, ಸಿದ್ದರಾಮಯ್ಯ ಎಲ್ಲರೂ ಸರ್ಕಾರಕ್ಕೆ ಸಲಹೆ ನೀಡಬೇಕು ಎಂದರು.
ಬರಿ ಘೋಷಣೆಯಿಂದ ಏನು ಆಗಲ್ಲ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಈಗ ತಾನೆ ಮದುವೆಯಾಗಿದೆ, ಒಂದೇ ಸರಿ 10 ಮಕ್ಕಳು ಯಾಕಾಗಿಲ್ಲ ಅಂದ್ರೆ ಹೇಗೆ..? ಮೀಸಲಾತಿ ಬಗ್ಗೆ ಎಲ್ಲಾ ಪಕ್ಷಗಳು ವಿಧಾನಮಂಡಲದಲ್ಲಿ ತೀರ್ಮಾನ ತೆಗೆದುಕೊಂಡಿವೆ. ಕೂಡಲೇ ಕೇಂದ್ರಕ್ಕೆ ಕಳುಹಿಸಿ ಶೆಡ್ಯೂಲ್ 9ಎ ನಲ್ಲಿ ಸೇರಿಸಬೇಕು. ಯಾವುದೇ ಸರ್ಕಾರಿ ಯೋಜನೆ ಜಾರಿಗೆ ತರಬೇಕಾದರೆ ಕಾಲಾವಕಾಶ ಬೇಕು ಎಂದರು.
2023 ಹೊಸ ವರ್ಷಾಚರಣೆ ವಿಚಾರದ ಬಗ್ಗೆ ಮಾತನಾಡಿ, ನನಗೆ ಹೊಸ ವರ್ಷ ಯುಗಾದಿಗೆ. ಇವಾಗ ಅಲ್ಲ. ಹೊಸ ವರ್ಷ, ಸಂಭ್ರಮಾಚರಣೆ ಬೇರೆ ಬೇರೆ. ಹಿಂದೂ ಸಂಪ್ರದಾಯದಂತೆ ಯುಗಾದಿಗೆ ನಾನು ಹೊಸ ವರ್ಷ ಮಾಡುತ್ತೇನೆ. ಇದು ಕ್ರಿಶ್ಚಿಯನ್ ರ ಹಬ್ಬ, ವಿದೇಶಿಯರ ಹಬ್ಬ ಅವರು ಸಂತೋಷದ ಮಾಡಲಿ. ಅದಕ್ಕೆ ನಾವೇನ್ ಅಡ್ಡಿಪಡಿಸಲ್ಲ ಎಂದರು.