ನಗರವ್ಯಾಪ್ತಿಯಲ್ಲಿ ನಡೆಯುತ್ತಿರುವುದು ತಿರುಪತಿ ಚೌರದ ಮಾದರಿಯ ರಸ್ತೆ ಅಭಿವೃದ್ದಿ. ಸೊರಬ ರಸ್ತೆ ಒಂದು ಭಾಗ ಅಭಿವೃದ್ದಿಪಡಿಸಿದ್ದು, ತಹಶೀಲ್ದಾರ್ ಕಚೇರಿ ಅರೆಬರೆ ನಿರ್ಮಿಸಿ ಲೋಕಾರ್ಪಣೆಗೆ ಮುಖ್ಯಮಂತ್ರಿಗಳನ್ನು ಕರೆಸುತ್ತಿರುವುದು ಶಾಸಕ ಹಾಲಪ್ಪ ಅವರ ಚುನಾವಣಾ ಗಿಮಿಕ್ ಆಗಿದೆ ಎಂದು ಆಮ್‌ಆದ್ಮಿ ಪಕ್ಷದ ನಿಯೋಜಿತ ವಿಧಾನಸಭಾ ಅಭ್ಯರ್ಥಿ ಕೆ.ದಿವಾಕರ್ ದೂರಿದ್ದಾರೆ.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಹಿಳಾ ಘಟಕದ ನೂತನ ಪದಾಧಿಕಾರಿಗಳಿಗೆ ಧ್ವಜ ನೀಡಿ ಮಾತನಾಡಿದ ಅವರು, ಚುನಾವಣೆಯಲ್ಲಿ ಪ್ರಚಾರ ಪಡೆಯುವ ಉದ್ದೇಶದಿಂದ ಅರೆಬರೆ ಕಾಮಗಾರಿಯ ಉದ್ಘಾಟನೆಗೆ ಮುಂದಾದರೆ ಆಮ್‌ಆದ್ಮಿ ಸಹಿಸುವುದಿಲ್ಲ. ಸಾಗರ ನಗರಸಭೆಗೆ ಪೂರ್ಣಪ್ರಮಾಣದ ಪೌರಾಯುಕ್ತರ ನೇಮಕ ಅತ್ಯಾಗತ್ಯವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಹ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ಶರಾವತಿ ಸಂತ್ರಸ್ತರಿಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಮೋಸ ಮಾಡಿದ್ದಾರೆ. ಕಳೆದ ವಿಧಾನಸಭಾ ಅಧಿವೇಶನದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಿದ್ದಾಗಿ ಗೃಹಸಚಿವ ಅರಗ ಜ್ಞಾನೇಂದ್ರ, ಶಾಸಕ ಹಾಲಪ್ಪ ಸೀಮೋಲಂಘನೆ ಮಾಡಿದ್ದೇವೆ ಎನ್ನುವಷ್ಟು ಸಂಭ್ರಮಿಸಿದ್ದರು. ಆದರೆ ಈತನಕ ಭೂಕಬಳಿಕೆ ವಿಶೇಷ ನ್ಯಾಯಾಲಯಕ್ಕೆ ಎಷ್ಟು ಪ್ರಕರಣ ಹಿಂದಕ್ಕೆ ಪಡೆದಿದ್ದೇವೆ ಎಂದು ಅಧಿಸೂಚನೆ ಕಳಿಸಿಲ್ಲ. ಭೂಕಬಳಿಕೆ ವಿಶೇಷ ನ್ಯಾಯಾಲಯದ ಕತ್ತಿ ರೈತರ ನೆತ್ತಿನ ಮೇಲೆ ತೂಗುತ್ತಿದೆ ಎಂದರು.
ಹಂದಿಗೋಡು ಸಿಂಡ್ರೋಮ್ ಸೋಂಕಿಗೆ ಒಳಗಾದ ಸಂತ್ರಸ್ತರಿಗೆ ಮಾಸಾಶನ ಕೊಡುವಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ಬೆಳ್ತಂಗಡಿ, ಸುಳ್ಯ, ಪುತ್ತೂರಿನಲ್ಲಿ ಎಂಡೋಸಲ್ಫೆನ್‌ನಿಂದ ವಿಕಲಚೇತನರಾಗಿರುವ ಮಾದರಿಯಲ್ಲೆ ಸಾಗರ ತಾಲ್ಲೂಕಿನ ಹಂದಿಗೋಡು ಸಂತ್ರಸ್ತರಿಗೆ ಹೆಚ್ಚು ಗೌರವಧನ ಮತ್ತು ಸೌಲಭ್ಯ ಒದಗಿಸಲು ಮನವಿ ಮಾಡಿದ ಅವರು, ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸ ಬೇಕಾಗಿದ್ದ ಶಾಸಕರು ಧರ್ಮಸ್ಥಳಕ್ಕೆ ಸಂತ್ರಸ್ತರನ್ನು ಕರೆದುಕೊಂಡು ಹೋಗಿ ಹರಕೆ ಮಾಡಿರುವುದು ಶಾಸಕರ ಅಸಮರ್ಥತನಕ್ಕೆ ಸಾಕ್ಷಿಯಾಗಿದೆ.
ತುಮರಿ ಸೇತುವೆಗೆ ೪೦೦ಕೋಟಿ ರೂ. ನೀಡಿದ್ದು ಸಂತ್ರಸ್ತರ ಮಾಡಿದ ತ್ಯಾಗಕ್ಕೆ ನೀಡಿದ ಸಣ್ಣ ಗೌರವವಾಗಿದೆ. ೧೯೬೨ರಿಂದ ಈತನಕ ಶರಾವತಿ ನದಿನೀರಿನಿಂದ ನಾಲ್ಕು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡಿ ೪ ಲಕ್ಷ ೧೫ಸಾವಿರ ಕೋಟಿ ರೂ. ಆದಾಯ ಸರ್ಕಾರದ ಬೊಕ್ಕಸಕ್ಕೆ ಸೇರಿದೆ. ಬ್ರಾಹ್ಮಣಾಭಿವೃದ್ದಿ ನಿಗಮ ಸರ್ಕಾರದ ಕಣ್ಣೊರೆಸುವ ತಂತ್ರ. ೫೦ ಕೋಟಿ ಅನುದಾನ ಘೋಷಣೆ ಮಾಡಿ, ೨ ಕೋಟಿ ರೂ. ನೀಡಿದೆ. ಇದು ಸಚ್ಚಿದಾನಂದ ಮೂರ್ತಿ ಅವರ ಟಿ.ಡಿ.,ಡಿ.ಎ.ಗೆ ಖರ್ಚಾಗಿದೆ ಎಂದು ಹೇಳಿದರು.
ಕ್ಷೇತ್ರವ್ಯಾಪ್ತಿಯಲ್ಲಿ ಆಮ್‌ಆದ್ಮಿ ಅತ್ಯಂತ ಸದೃಢವಾಗಿ ಬೆಳೆಯುತ್ತಿದೆ. ತಾಲ್ಲೂಕಿನ ೭೫ಸಾವಿರ ಮನೆಗಳಿಗೆ ಪಕ್ಷದ ಕರಪತ್ರ ವಿತರಣೆ ಮಾಡಲಾಗಿದೆ. ೧೫೦೦ಕ್ಕೂ ಹೆಚ್ಚು ಪ್ರಮುಖರನ್ನು ಜಾತ್ಯಾತೀತವಾಗಿ ಭೇಟಿ ಮಾಡಿ ಬೆಂಬಲ ಕೋರಲಾಗಿದೆ. ೭ ಹೋಬಳಿಗಳಲ್ಲಿ ಘಟಕ ಪ್ರಾರಂಭಿಸಿದ್ದು, ಬಿಜೆಪಿ ಮತ್ತು ಕಾಂಗ್ರೇಸ್‌ಗಿಂತಲೂ ಹೆಚ್ಚು ಪಕ್ಷವನ್ನು ಸದೃಢಗೊಳಿಸಲಾಗಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸುವುದು ಖಚಿತ. ಸಾಗರ ಕ್ಷೇತ್ರದ ಮಹಿಳಾ ಪ್ರಮುಖರಾಗಿ ವೀಣಾ ನಾಯ್ಡು, ಕವಿತಾ, ಪಾರ್ವತಮ್ಮ ಇನ್ನಿತರರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ಗೋಷ್ಟಿಯಲ್ಲಿ ತಾಲ್ಲೂಕು ಅಧ್ಯಕ್ಷ ಸತೀಶ್ ಕೆ., ನಗರ ಸಂಚಾಲಕರಾದ ವಿಜಯಕುಮಾರ್, ಸುಭಾಷ್ ಎಲ್.ವಿ., ವೇಣು, ನಾಗರಾಜ್, ವಿನಯ್, ವೀಣಾ ನಾಯ್ಡು, ಕವಿತಾ, ಪಾರ್ವತಮ್ಮ ಹಾಜರಿದ್ದರು.