ಇತಿಹಾಸ ಪ್ರಸಿದ್ದವಾದ ಶ್ರೀ ಮಾರಿಕಾಂಬಾ ಜಾತ್ರೆ ಅಂಗವಾಗಿ ಮಂಗಳವಾರ ಮರ ಕಡಿಯುವ ಶಾಸ್ತ್ರ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ದೇವಸ್ಥಾನದ ಗಂಡನ ಮನೆ ಪ್ರಧಾನ ಅರ್ಚಕರಾದ ರವಿ ಪೋತರಾಜ ಅವರನ್ನು ನೆಹರೂ ನಗರದ ಅವರ ಮನೆಯಿಂದ ಧಾರ್ಮಿಕ
ವಿಧಿವಿಧಾನದ ಪ್ರಕಾರ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆ ತರಲಾಯಿತು. ಮಾರ್ಗಮಧ್ಯ ಅಶೋಕ ರಸ್ತೆಯಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ಪೂತರಾಜನಿಗೆ ವಿಶೇಷ ಪೂಜೆ ನೆರವೇರಿತು. ಪೋತರಾಜನ ಮನೆಯಲ್ಲಿ ನಡೆದ ಪೂಜೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.
ಮಾರಿಕಾಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆದ ನಂತರ ಆವಾಹನೆಗೊಂಡ ಪೋತರಾಜ ಕೈನಲ್ಲಿದ್ದ ಚಾಟಿ ಬೀಸುತ್ತಾ ಹಲಸಿನ ಮರ ಹುಡುಕಿಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದನು. ನಂತರ ಶ್ರೀರಾಮ ಪುರ ಬಡಾವಣೆಯಲ್ಲಿರುವ ಕಾಲಭೈರವೇಶ್ವರ
ದೇವಸ್ಥಾನದ ಪಕ್ಕದಲ್ಲಿರುವ ಹಲಸಿನ ಮರಕ್ಕೆ ಪೋತರಾಜ ಚಾಟಿ ಹೊಡೆಯುವ ಮೂಲಕ ಮರವನ್ನು ಗುರುತಿಸುವ ಶಾಸ್ತ್ರ ಅಂತಿಮಗೊಂಡಿತು. ನಂತರ ಮರಕ್ಕೆ ವಿಶೇಷವಾದ ಪೂಜೆ ಸಲ್ಲಿಸಲಾಯಿತು. ತವರುಮನೆಯಲ್ಲಿ ನಡೆದ ಪೂಜೆಯಲ್ಲಿ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್, ಉಪಾಧ್ಯಕ್ಷರಾದ ಸುಂದರ್ ಸಿಂಗ್, ರಾಮಪ್ಪ, ವಿ.ಶಂಕರ್, ಸಹ ಕಾರ್ಯದರ್ಶಿಗಳಾದ ಎಸ್.ವಿ.ಕೃಷ್ಣಮೂರ್ತಿ, ಎಂ.ಡಿ.ಆನಂದ್, ಸಂಚಾಲಕರಾದ ಪುರುಷೋತ್ತಮ್, ಸಂತೋಷ್ ಶೇಟ್, ರವಿನಾಯ್ಡು, ಲೋಕೇಶಕುಮಾರ್ ಇನ್ನಿತರರು ಹಾಜರಿದ್ದರು