ಬಂಗಾರಪ್ಪ ಬಡವರ ಭಾಗ್ಯನಿಧಿಯಾಗಿದ್ದರು. ಅವರ ಬಡವರ ಪರವಾದ ಯೋಜನೆಗಳು ಇಂದಿಗೂ ರಾಜಕಾರಣ ಗಳಿಗೆ ಮಾರ್ಗದರ್ಶಕವಾಗಿವೆ ಎಂದು ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದರು. 

ಅವರು ಇಂದು ಬೆಳಿಗ್ಗೆ ಜಿಲ್ಲಾ ಆರ್ಯ ಈಡಿಗರ ಭವನದಲ್ಲಿ ಜಿಲ್ಲಾ ಆರ್ಯ ಈಡಿಗರ ಸಂಘದ ವತಿಯಿಂದ ನಡೆದ ಬಂಗಾರಪ್ಪ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಬಂಗಾರಪ್ಪ ರಾಜಕಾರಣದ ಒಂದು ವಿಶ್ವವಿದ್ಯಾನಿಲಯವಿದ್ದಂತೆ. ಅವರ ರಾಜಕೀಯ ಮೀಮಾಂಸೆಯನ್ನು ಕಲಿತ ಅನೇಕರು ಇಂದು ಬೇರೆಬೇರೆ ಪಕ್ಷಗಳಲ್ಲಿ ತಮ್ಮದೇ ಆದ ವಿಶೇಷ ಸ್ಥಾನ ಪಡೆದಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಬಡವರ ಪರವಾದ ಅನೇಕ ಯೋಜನೆಗಳನ್ನು ಜಾರಿಗೆ ತಂದವರು. ಅವರಿಗೆ ಬಡವರ ಬೆವರಿನ ಬೆಲೆ ಗೊತ್ತಿತ್ತು. ಹಾಗಾಗಿಯೇ ಇಡೀ ಕರ್ನಾಟಕದಲ್ಲಿ ಅವರೊಬ್ಬ ಧೀಮಂತ ನಾಯಕ ಎನಿಸಿಕೊಂಡರು ಎಂದರು.

ಅವರ ನಿಷ್ಠೂರ ನುಡಿಗಳು ಕೂಡ ಇಷ್ಟವಾಗುತ್ತಿದ್ದವು. ನನ್ನಂತಹ ಅನೇಕ ವ್ಯಕ್ತಿಗಳನ್ನು ಗುರುತಿಸಿ ನಮಗೊಂದು ರಾಜಕೀಯ ಶಕ್ತಿಯನ್ನು ಅವರು ನೀಡಿದ್ದಾರೆ. ಅವರಿಂದ ಬೆಳಕಿಗೆ ಬಂದ ಕೆಲವರು ಅವರನ್ನೇ ಮರೆತಿರುವುದು ವಿಷಾದನೀಯ. ಅವರ ಸಿದ್ಧಾಂತಗಳು ಪಕ್ಷಾತೀತವಾಗಿವೆ. ಅದನ್ನು ಅನುಸರಿಸುವುದು ಇಂದಿನ ಎಲ್ಲಾ ರಾಜಕಾರಣ ಗಳ ಅಗತ್ಯವಾಗಿದೆ. ಪ್ರಸ್ತುತ ರಾಜಕಾರಣದ ದಿಕ್ಕುಗಳು ಬದಲಾಗುತ್ತಿರುವ ಸಂದರ್ಭದಲ್ಲಿ ಬಂಗಾರಪ್ಪನವರ ರಾಜಕೀಯ ಬದುಕು ವರ್ಣರಂಜಿತವಾಗಿತ್ತು. ಮತ್ತು ವ್ಯಕ್ತಿಯಾಗಿ ಅವರು ಶಕ್ತಿಯಾಗಿ ಬೆಳೆದು ಬಂದರು ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಹುಲ್ತಿಕೊಪ್ಪ ಆರ್. ಶ್ರೀಧರ್, ಜಿ.ಡಿ. ಮಂಜುನಾಥ್, ಹೊನ್ನಪ್ಪ, ಬಿ.ಸುರೇಶ್, ಕಾಗೋಡು ರಾಮಪ್ಪ, ಎಸ್.ಎಂ. ಮಹೇಶ ಬಂಡಿ, ರಾಮಚಂದ್ರಪ್ಪ, ತೇಕಲೆ ರಾಜಪ್ಪ, ಡಿ. ದೇವಪ್ಪ, ಹೆಚ್.ಎನ್. ಮಹೇಂದ್ರ, ವೆಂಕಟೇಶ ಮೂರ್ತಿ, ಕೃಷ್ಣಮೂರ್ತಿ ತಡಗಣ ನಾಗರಾಜ್, ಕುಪ್ಪಯ್ಯ, ರಮೇಶ್, ಕೆ.ಎಲ್. ಉಮೇಶ್, ರಾಜಕುಮಾರ್, ನಾಗರಾಜ್ ಇನ್ನಿತರರಿದ್ದರು

By admin

ನಿಮ್ಮದೊಂದು ಉತ್ತರ

error: Content is protected !!