ಶಿವಮೊಗ್ಗ: ಬಿಜೆಪಿ ಸರ್ಕಾರ ಬೆಣ್ಣೆ ಮಾತನಾಡುತ್ತಾ ದಲಿತರನ್ನು ದಿಕ್ಕುತಪ್ಪಿಸುತ್ತಿದೆ. ದಲಿತರು ಅವರ ಮಾತಿಗೆ ಮರುಳಾಗದೆ ಕಾಂಗ್ರೆಸ್‌ನಲ್ಲೇ ಉಳಿಯಬೇಕು. ಬಿಜೆಪಿಯನ್ನು ದೂರ ಇಡಬೇಕು ಎಂದು ಕೆಪಿಸಿಸಿ ಎಸ್ಸಿ ಘಟಕದ ಅಧ್ಯಕ್ಷ ಆರ್. ಧರ್ಮಸೇನ ಹೇಳಿದರು. 

ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಮೀಸಲಾತಿಯೂ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುವುದಾಗಿ ಸುಳ್ಳುಹೇಳುತ್ತದೆ. ದಲಿತರ ಮತ ಪಡೆಯಲು ಈ ರೀತಿಯ ಆಮಿಷ ತೋರಿಸುತ್ತಿದ್ದಾರೆ. ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮುಗ್ದ ದಲಿತರು ಇದನ್ನೇ ನಿಜವೆಂದು ನಂಬಬಾರದು. ದಲಿತರೆಲ್ಲರೂ ಕಾಂಗ್ರೆಸ್ ಅನ್ನೇ ಬೆಂಬಲಿಸಬೇಕು ಎಂದರು.

ದಲಿತರಿಗೆ ಸರ್ಕಾರಿ ಸೌಲಭ್ಯಗಳನ್ನು ನೀಡುತ್ತಿಲ್ಲ. ಅನುದಾನವನ್ನು ನೀಡುತ್ತಿಲ್ಲ, ನೀಡಿದರೂ ಅದನ್ನು ಖರ್ಚು ಮಾಡುತ್ತಿಲ್ಲ. ದಲಿತರ ಮಕ್ಕಳ ಶಿಕ್ಷಣವನ್ನು ಕಸಿಯುವ ಕೆಲಸಕ್ಕೆ ಕೈ ಹಾಕಿದೆ. ವಿದ್ಯಾರ್ಥಿ ವೇತನವನ್ನು ನಿಲ್ಲಿಸಲಾಗಿದೆ. ಸೌಲಭ್ಯಗಳು ಹೆಸರಿಗೆ ಮಾತ್ರ ಇವೆ. ಪಡಿತರವನ್ನು ಕೊಡುತ್ತಿಲ್ಲ. ಒಟ್ಟಾರೆ ದಲಿತರನ್ನು ಕಡೆಗಣ ಸಲಾಗುತ್ತಿದೆ ಎಂದು ದೂರಿದರು.

ಇದರ ಜೊತೆಗೆ ಎಲೆಚುಕ್ಕಿ ರೋಗ ತಡೆಯಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಶರಾವತಿ ಸಂತ್ರಸ್ತ ಸಮಸ್ಯೆ ಹಾಗೆಯೇ ಇದೆ. ದಲಿತರ ಮನೆಗಳಿಗೆ ಇಂದಿಗೂ ಹಕ್ಕುಪತ್ರ ನೀಡುತ್ತಿಲ್ಲ. ಬಗರ್‌ಹುಕುಂ ಸಮಸ್ಯೆಯನ್ನು ಜೀವಂತವಾಗಿರಿಸಿದೆ. ಸದಾಶಿವ ಆಯೋಗದ ಬಗ್ಗೆ ಮಾತನಾಡುತ್ತಿಲ್ಲ. ಕಾಂತರಾಜ ವರದಿ ಚರ್ಚಿಸದೆ ಸುಪ್ರಿಂ ಆಜ್ಞೆ ಮೂಲಕ ಮೀಸಲಾತಿ ಏರಿಸಿರುವುದು ಕಣ್ಣೊರೆಸುವ ತಂತ್ರವಾಗಿದೆ ಎಂದು ದೂರಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿರುವುದು ನಿಜ. ಅದರಲ್ಲೂ ಶಿವಮೊಗ್ಗ ಮೀಸಲು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿನ್ನಡೆ ಸಾಧಿಸಿದೆ. ಇದಕ್ಕಾಗಿ ಪ್ರತಿ ಜಿಲ್ಲೆಗಳಲ್ಲಿ ಮತ್ತು ಮೀಸಲಾತಿ ಕ್ಷೇತ್ರಗಳಲ್ಲಿ ಮತ್ತಷ್ಟು ಸಂಘಟನೆ ಮಾಡಲಾಗುತ್ತಿದೆ. ಜಿಲ್ಲಾಮಟ್ಟದ ಸಭೆಗಳು ಕೂಡ ನಡೆಯುತ್ತಿವೆ. ದಲಿತರನ್ನು ಕಾಂಗ್ರೆಸ್ ಬಿಟ್ಟು ಹೋಗದಂತೆ ನೋಡಿಕೊಳ್ಳಲಾಗುವುದು. ಏಕೆಂದರೆ ಕಾಂಗ್ರೆಸ್ ದಲಿತರನ್ನ ಎಂದಿಗೂ ನಿರ್ಲಕ್ಷö್ಯ ಮಾಡಲಿಲ್ಲ. ಅಂಬೇಡ್ಕರ್ ರೂಪಿಸಿದ ಸಂವಿಧಾನಕ್ಕೆ ಬದ್ಧವಾಗಿಯೆ ದಲಿತರ ಕಲ್ಯಾಣಕ್ಕಾಗಿ ನೂರಾರು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಬಿಜೆಪಿ ಸರ್ಕಾರ ದಲಿತರನ್ನು ಕಡೆಗಣ ಸುತ್ತಿದೆ. ಇಂತಹ ಧೋರಣೆಯನ್ನು ಖಂಡಿಸುತ್ತೇವೆ. ಮತ್ತೊಮ್ಮೆ ದಲಿತರು ಈ ಬಾರಿ ಕಾಂಗ್ರೆಸ್ ಅನ್ನೇ ಬೆಂಬಲಿಸಬೇಕು ಎಂದರು. 

ಜ.8ರಂದು ಚಿತ್ರದುರ್ಗದಲ್ಲಿ ಐಕ್ಯತಾ ಸಮಾವೇಶ: ಜ.8ರಂದು ಚಿತ್ರದುರ್ಗದ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 11 ಗಂಟೆಗೆ ರಾಜ್ಯ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಐಕ್ಯತಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಧರ್ಮಸೇನ್ ತಿಳಿಸಿದರು. ಚುನಾವಣೆಗಾಗಿ ಈ ಸಮಾವೇಶ ನಡೆಯುವುದಿಲ್ಲ. ಕಾಂಗ್ರೆಸ್ ಎಂದಿಗೂ ದಲಿತರ ಪರವಾಗಿಯೆ ಇದೆ ಎಂದು ಸಮರ್ಥಿಸಲು ಮತ್ತು ಬಿಜೆಪಿ ದಲಿತರ ವಿರೋಧಿಯಾಗಿದೆ ಎಂದು ತಿಳಿಸುವ ಜಾಗೃತಿ ಮೂಡಿಸುವ ಸಮಾವೇಶ ಇದಾಗಿದ್ದು, ಸುಮಾರು 5 ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದರು. ಈ ಸಮಾವೇಶದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಹೆಚ್. ಮುನಿಯಪ್ಪ, ಜಿ. ಪರಮೇಶ್ವರ್, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮುಂತಾದವರು ಆಗಮಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಪ್ರಮುಖರಾದ ಬಲದೇವಕೃಷ್ಣ, ರವಿ, ವೈ.ಹೆಚ್. ನಾಗರಾಜ್, ಚಂದ್ರಶೇಖರ್, ನಾಗರಾಜ್, ಸೋಮಣ್ಣ, ಚೇತನ್ ಸೇರಿದಂತೆ ಹಲವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!