ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆಯ ರಾಜ್ಯ ಮಟ್ಟದ ವೈದ್ಯರ ಕ್ರಿಕೆಟ್ ಪಂದ್ಯಾವಳಿ
ಶಿವಮೊಗ್ಗ: ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಪ್ರತಿಯೊಬ್ಬರು ಆಸಕ್ತ ಸ್ಪರ್ಧೆಗಳಲ್ಲಿ ಅಭ್ಯಾಸ ಮಾಡಬೇಕು. ನಿರಂತರವಾಗಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಆರೋಗ್ಯ ಚೆನ್ನಾಗಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಹೇಳಿದರು.
ಐಎಂಎ ಕ್ರಿಕೆಟ್ ಅಸೋಸಿಯೆಷನ್ ಶಿವಮೊಗ್ಗ ವತಿಯಿಂದ ಶಿವಮೊಗ್ಗ ನಗರದ ಪೆಸಿಟ್ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ “ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆಯ ರಾಜ್ಯ ಮಟ್ಟದ ವೈದ್ಯರ ಕ್ರಿಕೆಟ್ ಪಂದ್ಯಾವಳಿ” ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲ ಕ್ಷೇತ್ರಗಳು ಅತ್ಯಂತ ಕ್ರೀಯಾಶೀಲವಾಗಿದ್ದು, ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುತ್ತಿವೆ. ಬೇರೆ ಭಾಗಗಳಿಗಿಂತ ಶಿವಮೊಗ್ಗ ಉತ್ತಮ ಹೆಸರು ಪಡೆದಿದೆ. ಹೆಚ್ಚು ಕ್ರಯಾತ್ಮಕವಾಗಿ ಶಿವಮೊಗ್ಗ ಕಾಣಿಸುತ್ತಿದೆ. ವೈದ್ಯರ ಸಂಘವು ರಾಜ್ಯಮಟ್ಟದ ಪಂದ್ಯಾವಳಿ ಆಯೋಜಿಸಿರುವುದು ಅಭಿನಂದನೀಯ ಎಂದು ತಿಳಿಸಿದರು.
ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯು ಅತ್ಯಂತ ಶ್ರಮ ವಹಿಸಿ ಕೆಲಸ ಮಾಡುವ ಇಲಾಖೆ ಆಗಿದ್ದು, ಹೆಚ್ಚು ಒತ್ತಡ ಇರುತ್ತದೆ. ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಕೆಲಸದ ಒತ್ತಡ ಮರೆಯಾಗುತ್ತದೆ. ಕ್ರೀಡೆ ಅತ್ಯಂತ ಉತ್ಸಾಹದಿಂದ ಇರಲು ನೆರವಾಗುತ್ತದೆ ಎಂದರು.
ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆ ಅಧ್ಯಕ್ಷ ಡಾ. ಅರುಣ್ ಎಂ.ಎಸ್. ಮಾತನಾಡಿ, ಐಎಂಎ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜಿಸಿದ್ದು, ಕ್ರೀಡೆ ಎಲ್ಲರಲ್ಲಿಯೂ ಸ್ಫೂರ್ತಿ ನೀಡುವ ಜತೆಯಲ್ಲಿ ಸಂಘಟನಾ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಭಾರತೀಯ ವೈದ್ಯಕೀಯ ಸಂಘದ ಸದಸ್ಯತ್ವ ನೋಂದಣಿ ಕೂಡ ಗಮನ ವಹಿಸಲಾಗಿದೆ. ರಾಜ್ಯ ಮಟ್ಟದಲ್ಲಿ ಸಂಘಟನೆ ಬಲಿಷ್ಠಗೊಳ್ಳಲು ಅನುಕೂಲವಾಗಿದೆ ಎಂದು ಹೇಳಿದರು.
ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕ ಡಾ. ಎಸ್.ಶ್ರೀಧರ್, ಸುಬ್ಬಯ್ಯ ಆಸ್ಪತ್ರೆಯ ಎಂ.ಡಿ. ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು.