ಶಿವಮೊಗ್ಗ: ಶರಾವತಿ ಸಂತ್ರಸ್ತರ ಬಗ್ಗೆ ಜಿಲ್ಲೆಯ ಬಿಜೆಪಿ ನಾಯಕರು ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು ಅಧಿವೇಶನದಲ್ಲಿ ಪ್ರಸ್ತಾಪಿಸಿ ಕೇಂದ್ರದ ಮೇಲೆ ಒತ್ತಡ ತಂದು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಕುಮಾರಿ ಆಗ್ರಹಿಸಿದ್ದಾರೆ.


ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಸಂತ್ರಸ್ತರನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ಭಾವನಾತ್ಮಕವಾಗಿ ರಾಜ್ಯಸಭೆ ಸದಸ್ಯ ವೀರೇಂದ್ರ ಹೆಗ್ಗಡೆಯವರ ಜೊತೆ ಮಾತನಾಡಿದ ಹಾಗೆ ಮಾಡಿ ತಮ್ಮ ಮತ ಬ್ಯಾಂಕ್ ಗಟ್ಟಿಗೊಳಿಸುವ ಹುನ್ನಾರ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಅಧಿವೇಶನದಲ್ಲಿ ಸಂತ್ರಸ್ತರ ಬಗ್ಗೆ ಧ್ವನಿ ಎತ್ತಲಿ. ಧರ್ಮಸ್ಥಳ ಕ್ಷೇತ್ರದ ಬಗ್ಗೆ ಎಲ್ಲರಿಗೂ ಭಕ್ತಿ ಇದೆ. ಆದರೆ ಈ ಭಕ್ತಿಯನ್ನೇ ರಾಜಕೀಯ ಶಕ್ತಿಯನ್ನಾಗಿ ದುರುಪಯೋಗಪಡಿಸಿಕೊಳ್ಳುವುದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಸುಮಾರು ೨೦ ಸಾವಿರಕ್ಕೂ ಹೆಚ್ಚು ಮುಳುಗಡೆ ಸಂತ್ರಸ್ತರಿದ್ದಾರೆ. ಆದರೂ ಕೂಡ ಶಾಸಕ ಕೆ.ಬಿ. ಅಶೋಕ್ ನಾಯ್ಕ ತುಟಿ ಪಿಟಿಕ್ ಎನ್ನುತ್ತಿಲ್ಲ. ಜಿಲ್ಲೆಯ ಬಿಜೆಪಿ ನಾಯಕರುಗಳೆಲ್ಲ ಸುಮ್ಮನಿದ್ದಾರೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಗಳು ಇದ್ದರೂ ಕೂಡ ಹರತಾಳು ಹಾಲಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ಧರ್ಮಸ್ಥಳಕ್ಕೆ ಸಂತ್ರಸ್ತರನ್ನು ಕರೆದುಕೊಂಡು ಹೋಗುವುದು ಎಷ್ಟರ ಮಟ್ಟಿಗೆ ಸರಿ? ಭಾವನಾತ್ಮಕವಾಗಿ ಸಂತ್ರಸ್ತರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
ಬಿಜೆಪಿ ನಾಯಕರು ಓಟ್ ಬ್ಯಾಂಕ್ ರಾಜಕಾರಣ ಬಿಟ್ಟು ಸಂತ್ರಸ್ತರ ಸಮಸ್ಯೆಯನ್ನು ನಿಜವಾಗಿ ಬಗೆಹರಿಸುವ ನಿಟ್ಟಿನತ್ತ ಸ್ಪಂದಿಸಲಿ. ಬಿ.ವೈ. ಸಂಸದ ರಾಘವೇಂದ್ರ ಸೇರಿದಂತೆ ರಾಜ್ಯದ ಸಂಸದರು ಈ ಬಗ್ಗೆ ಕೇಂದ್ರದ ಮೇಲೆ ಒತ್ತಡ ತರಲಿ. ಜಿಲ್ಲೆಯ ಮತ್ತು ಸಂತ್ರಸ್ತರ ಭಾಗದ ಶಾಸಕರು ಚಳಿಗಾಲದ ಅಧಿವೇಶನದಲ್ಲಿ ಇದನ್ನು ಚರ್ಚಿಸಲಿ. ರಾಜ್ಯ ಸರ್ಕಾರ ತಕ್ಷಣವೇ ಸಂತ್ರಸ್ತರ ಸಮಸ್ಯೆ ಕೈಗೆತ್ತಿಕೊಂಡು ಕೇಂದ್ರದ ಮೇಲೆ ಒತ್ತಡ ತಂದು ಅಗತ್ಯ ಕಾಯಿದೆಗಳನ್ನು ರೂಪಿಸಿ ಕತ್ತಲಲ್ಲಿರುವ ಸಂತ್ರಸ್ತರ ಬದುಕಿಗೆ ಬೆಳಕು ನೀಡಬೇಕು ಎಂದು ಅನಿತಾಕುಮಾರಿ ಒತ್ತಾಯಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!