ಕಾರ್ಮಿಕರು ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯದ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಅಸಂಘಟಿತ ಕಾರ್ಮಿಕ ಸಂಘಟನೆಗಳ ನಾಯಕರು ಅವರಿಗೆ ಅರಿವು ಮೂಡಿಸಬೇಕು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.


ಹೊನ್ನಾಳಿ ರಸ್ತೆಯ ಶುಭಶ್ರೀ ಕಲ್ಯಾಣ ಮಂಟಪದಲ್ಲಿ ಶಿವಮೊಗ್ಗ ಕಟ್ಟಡ ಕಾರ್ಮಿಕರ ಸೌಹಾರ್ದ ಸಹಕಾರಿ ಸಂಘ, ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಸಂಘದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಫಲಾನುಭವಿಗಳಿಗೆ ಚೆಕ್ ವಿತರಿಸಿ ಅವರು ಮಾತನಾಡಿದರು.


ಕಟ್ಟಡ ಕಾರ್ಮಿಕರ ಹಾಗೂ ಇತರೆ ನಿರ್ಮಾಣ ಮಾಡುವ ಮಂಡಳಿಯಲ್ಲಿ ನೋಂದಾಯಿತರಾದ ಫಲಾನುಭವಿಗಳು ಹಾಗೂ ಅವರ ಮಕ್ಕಳಿಗೆ ಸರ್ಕಾರ ಅನೇಕ ಸೌಲಭ್ಯ ನೀಡಲಾಗುತ್ತಿದ್ದು, ಉಚಿತ ಸಾಮೂಹಿಕ ಮದುವೆ ಎಂದರೆ ಬಡವರಿಗೆ ಅದೊಂದು ವರದಾನ. ವಿವಾಹ ಆಗುವ ಜೋಡಿಗೆ ಕಾರ್ಮಿಕ ನಿಧಿಯಿಂದ ಸರ್ಕಾರ ೪೦ ಸಾವಿರ ರೂ.ಗಳನ್ನು ನೀಡುತ್ತದೆ. ಸಂಘಟನೆಯ ವತಿಯಿಂದ ಕೂಡ ತಾಳಿ,ಕಾಲುಂಗುರ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ.


ಬಡ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಕಟ್ಟಡ ನಿರ್ಮಾಣ ಮಾಡುವವರಿಂದ ಸರ್ಕಾರ ಸಂಗ್ರಹಿಸಿದ ತೆರಿಗೆಯಲ್ಲಿ ಸ್ವಲ್ಪ ಪಾಲು ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಬಳಸಲಾಗುತ್ತದೆ. ಕಾರ್ಮಿಕರ ಮಕ್ಕಳಿಗೆ, ವಿಧ್ಯಾಭ್ಯಾಸಕ್ಕೆ ಸಹಾಯಧನ ಈ ನಿಧಿಯಿಂದಲೇ ನೀಡಲಾಗುತ್ತದೆ. ಅಪಘಾತವಾದಾಗ ಮತ್ತು ಅನಾರೋಗ್ಯ ಸಂದರ್ಭದಲ್ಲಿ ಮತ್ತು ಮೃತಪಟ್ಟಾಗ ಈ ನಿಧಿಯಿಂದ ಅನೇಕ ಸೌಲಭ್ಯಗಳು ಕಟ್ಟಡ ಕಾರ್ಮಿಕರಿಗೆ ದೊರೆಯುತ್ತದೆ. ಇದರ ಬಗ್ಗೆ ಕಾರ್ಮಿಕರು ತಿಳಿದುಕೊಳ್ಳಬೇಕು ಮತ್ತು ಇದಕ್ಕಾಗಿಯೇ ಕಟ್ಟಡ ಕಾರ್ಮಿಕರ ಸಂಘ ಸ್ಥಾಪಿಸಲಾಗಿದೆ. ಕಟ್ಟಡ ಕಾರ್ಮಿಕರ ಸೌಹಾರ್ದ ಸಹಕಾರಿ ಸಂಘದಿಂದ ಸಾಲ ಸೌಲಭ್ಯಗಳನ್ನು ಕೂಡ ನೀಡಲಾಗುತ್ತಿದೆ. ಎಲ್ಲಾ ಕಾರ್ಮಿಕರು ತಮ್ಮ ಮಕ್ಕಳಿಗೆ ಮೊದಲು ಶಿಕ್ಷಣದಿಂದ ವಂಚಿತರನ್ನಾಗಿಸದೆ ಶಿಕ್ಷಣಕ್ಕೆ ಮೊದಲ ಆಧ್ಯತೆ ನೀಡಿ ಎಂದರು.


ಈ ಸಂದರ್ಭದಲ್ಲಿ ಸೇವಾಲಾಲ್ ಗುರುಗಳು ಸಾನಿಧ್ಯ ವಹಿಸಿದ್ದರು. ಶಾಸಕರಾದ ಎಸ್.ರುದ್ರೇಗೌಡ, ಮೇಯರ್ ಶಿವಕುಮಾರ್,ಸೂಡಾ ಅಧ್ಯಕ್ಷ ನಾಗರಾಜ್, ಕೆ.ಈ.ಕಾಂತೇಶ್, ಶಾಂತ ಸುರೇಂದ್ರ, ಅಧ್ಯಕ್ಷರಾದ ಆರ್.ವಾಸುದೇವನ್, ಕೆ.ಮುರುಗನ್, ಎನ್.ಡಿ.ಸತೀಶ್, ಎಸ್.ದತ್ತಾತ್ರಿ, ಪಳನಿ, ಪ್ರಮುಖರಾದ ಮುನಿಸ್ವಾಮಿ, ಕೆ.ಭಾಸ್ಕರ್, ಜಯಪ್ಪ ಮೊದಲಾದವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!