ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಡವಟ್ಟು ನಿರ್ಧಾರಗಳಿಂದಾಗಿ ಅಡಿಕೆ ಬೆಲೆ ಇಂದು ಕುಸಿದಿದೆ . ಇದಕ್ಕೆಲ್ಲಾ ಪ್ರಧಾನಿ ಮೋದಿಯವರೇ ಕಾರಣ ಎಂದು ಕೆಪಿಸಿಸಿ ಮಲೆನಾಡು ರೈತಮಸ್ಯೆಗಳ ಅಧ್ಯಯನ ಸಮಿತಿಯ ಸಂಯೋಜಕ ಬಿ.ಎ. ರಮೇಶ್ ಹೆಗ್ಡೆ ಹೆಳಿದರು.
ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೨೦೧೪ರಲ್ಲಿ ಪ್ರಧಾನಿಯವರು ಚಿಕ್ಕಮಗಳೂರಿಗೆ ಬಂದಾಗ ಅಡಿಕೆಗೆ ಮಾನ ತರುತ್ತೇನೆ. ಅಡಿಕೆ ಬೆಳೆಗಾರರ ಸಂಕಷ್ಟವನ್ನು ಪರಿಹರಿಸುತ್ತೇನೆ ಎಂದು ಮಾತು ಕೊಟ್ಟಿದ್ದರು. ಅದಾಗಿ ಈಗ ಎಂಟು ವರ್ಷಗಳಾಗಿವೆ. ಆದರೂ ಕೂಡ ಅಡಿಕೆ ಬೆಳೆಗಾರರ ಸಮಸ್ಯೆ ಬಗೆಹರಿಯದೆ ದ್ವಿಗುಣಗೊಂಡಿದೆ. ಅಡಿಕೆಗೆ ಮಾನ ತರುವುದಿರಲಿ ಮೋದಿ ಸರ್ಕಾರ ಅಡಿಕೆಗೆ ಅಗೌರವವನ್ನುಂಟುಮಾಡಿದೆ ಎಂದರು
ಮೋದಿ ಸರ್ಕಾರದ ತಪ್ಪು ನಿರ್ಧಾರಗಳೇ ಅಡಿಕೆ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಭೂತಾನ್‌ನಿಂದ ಅಡಿಕೆಯನ್ನು ಯಾವ ಸುಂಕವನ್ನೂ ಹೇರದೆ ಆಮದು ಮಾಡಿಕೊಳ್ಳಲಾಯಿತು. ಈಶಾನ್ಯ ರಾಜ್ಯಗಳಾದ ಮಿಜೋರಾಂ ಮತ್ತು ಮಣಿಪುರ ರಾಜ್ಯಗಳ ಮೂಲಕ ಅಡಿಕೆ ಕಳ್ಳ ಸಾಗಾಣಿಕೆಗೆ ಅವಕಾಶ ನೀಡಲಾಯಿತು. ಕೇವಲ ಗುಜರಾಜತ್ ಮತ್ತು ಉತ್ತರ ಭಾರತದ ಕೆಲವೇ ಅಡಿಕೆ ವರ್ತಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ರಾಜ್ಯದ ಅಡಿಕೆ ಬೆಳೆಗಾರರ ಹಿತವನ್ನು ಮೋದಿಯವರು ಕಡೆಗಣಿಸಿದ್ದಾರೆ ಎಂದರು.
ದೇಶದ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯದ ಕೊಡುಗೆಯೇ ಶೇ.೮೦ರಷ್ಟಿದೆ. ನಾಲ್ಕು ತಿಂಗಳ ಹಿಂದೆ ಕ್ವಿಂಟಾಲಿಗೆ ೫೯ ಸಾವಿರ ಇದ್ದ ಬೆಲೆ ಈಗ ೩೯ ಸಾವಿರಕ್ಕೆ ಇಳಿದಿದೆ. ೧೦ರಿಂದ ೧೫ ಸಾವಿರದಷ್ಟು ಆರ್ಥಿಕ ನಷ್ಟವಾಗಿದೆ. ಇಡೀ ದೇಶದ ಆರ್ಥಿಕ ವ್ಯವಸ್ಥೆಗೆ ಅಡಿಕೆ ತನ್ನದೇ ಆದ ಕೊಡುಗೆ ನೀಡಿದೆ. ಈ ರೀತಿ ಅಡಿಕೆ ಬೆಲೆ ಕುಸಿತಕ್ಕೆ ನರೇಂದ್ರ ಮೋದಿಯವರು ನೇರಹೊಣೆಯಾಗುತ್ತಾರೆ ಎಂದರು.
ಕರ್ನಾಟಕದಲ್ಲಿ ಆರಗ ಜ್ಞಾನೇಂದ್ರ ಅವರು ಅಡಿಕೆ ಕಾರ್ಯಪಡೆಯ ಅಧ್ಯಕ್ಷರು ಕೂಡ. ಅಡಿಕೆಯ ಬಗ್ಗೆ ಯಾವ ಹಿತವನ್ನೂ ಇವರು ಕಾಯಲಿಲ್ಲ. ಸುಮಾರು ೧೦೦ ಕೋಟಿ ರೂಗಳನ್ನು ಮುಖ್ಯಮಂತ್ರಿಗಳು ಅಡಿಕೆ ಕಾರ್ಯಪಡೆಗೆ ನೀಡಿದ್ದರು. ಈ ಹಣ ಈಗ ಎಲ್ಲಿದೆ, ಅಡಿಕೆ ಬೆಳೆಗಾರರ ಹಿತ ಕಾಯದ ಅಡಿಕೆ ಕಾರ್ಯಪಡೆ ಏಕೆ ಬೇಕು ಅದನ್ನು ರದ್ದು ಮಾಡಲಿ ಎಂದ ಅವರು, ಕಾರ್ಯಪಡೆಗೂ ಕೂಡ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಲಿ ಎಂದರು.
ರಾಜ್ಯದ ತೋಟಗಾರಿಕಾ ಸಚಿವ ಮುನಿರತ್ನ ಅವರು ಅಡಿಕೆ ಬೆಲೆ ದಿನೇದಿನೇ ಕುಸಿಯುತ್ತಿದ್ದರೂ ಕೂಡ ಗಮನಹರಿಸಿಲ್ಲ. ಹೋಗಲಿ, ಎಲೆಚುಕ್ಕಿ ರೋಗ ಬಂದು ತಿಂಗಳುಗಳೇ ಮುಗಿದಿವೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಚಿವ ಮುನಿರತ್ನ ಮಾತ್ರ ತಮಗೇನೂ ಗೊತ್ತಿಲ್ಲ ಎನ್ನುವಂತೆ ಸುಮ್ಮನೆ ಕುಳಿತಿದ್ದಾರೆ. ಒಂದು ದಿನವೂ ರೈತರ ತೋಟಕ್ಕೆ ಹೋಗಲಿಲ್ಲ. ಸಾಂತ್ವನ ಹೇಳಲಿಲ್ಲ. ಇವರು ತಮ್ಮ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದರು.
ಸಂಸದ ರಾಘವೇಂದ್ರ ಅವರು ಕೂಡ ಅಡಿಕೆ ಬೆಳೆಗಾರರ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಕರ್ನಾಟಕದ ಅದರಲ್ಲೂ ಅಡಿಕೆ ಬೆಳೆಯುವ ಪ್ರದೇಶಗಳ ಯಾವ ಸಂಸದರೂ ಕೂಡ ಸಂಸತ್‌ನಲ್ಲಿ ಒಮ್ಮೆಯೂ ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಕೈಗೆತ್ತಿಕೊಳ್ಳಲಿಲ್ಲ. ಬದಲಾಗಿ ಬಿಜೆಪಿ ಸಂಸದರು ಸುಪ್ರೀಂ ಕೋರ್ಟಿಗೆ ಅಡಿಕೆ ಹಾನಿಕರ ಎಂದು ಪ್ರಮಾಣ ಪತ್ರ ಸಲ್ಲಿಸಿದಾಗಲೂ ಕೂಡ ಸುಮ್ಮನಿದ್ದರು. ರಾಜ್ಯಸರ್ಕಾರ ಕೂಡ ಖಾಸಗಿ ಸಂಸ್ಥೆಯಾದ ಎಂ.ಎಸ್. ರಾಮಯ್ಯ ಸಂಶೋಧನಾ ಕೇಂದ್ರಕ್ಕೆ ವರದಿ ನೀಡುವಂತೆ ಹೇಳಿದೆ. ಆದರೆ ಸುಪ್ರೀಂ ಕೋರ್ಟ್ ಖಾಸಗಿ ಸಂಸ್ಥೆಯ ವರದಿಯನ್ನ ಮಾನ್ಯತೆ ಮಾಡುವುದಿಲ್ಲ ಎಂಬ ಅಂಶವೂ ಕೂಡ ರಾಜ್ಯಸರ್ಕಾರಕ್ಕೆ ಗೊತ್ತಿಲ್ಲ ಎಂದರು.
ಅಮಿತ್ ಶಾ ಕೂಡ ಶಿವಮೊಗ್ಗದಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲು ೫೦೦ ಕೋಟಿ ರೂ. ನೀಡುವುದಾಗಿ ಹೇಳಿದ್ದರು. ಈಗ ನಾಲ್ಕು ವರ್ಷಗಳಾಗಿವೆ. ಶಿವಮೊಗ್ಗದಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪನೆ ಆಗಿಯೇ ಇಲ್ಲ. ಚುನಾವಣೆಯ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಮಖಂಡರು ಅಡಿಕೆ ಬೆಳೆಗಾರರಿಗೆ ಭರವಸೆ ನೀಡುತ್ತಾರೆ. ನಂತರ ಮೆರೆತುಬಿಡುತ್ತಾರೆ ಎಂದು ದೂರಿದರು.
ಅಡಿಕೆ ಬೆಳೆಗಾರರ ಸಮಸ್ಯೆ, ಎಲೆಚುಕ್ಕಿ ರೋಗ ಮುಂತಾದ ವಿಷಯಗಳನ್ನಿಟ್ಟುಕೊಂಡು ಕಾಂಗ್ರೆಸ್ ಬಹುದೊಡ್ಡ ಹೋರಾಟವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಭೂಪಾಲ್, ನಗರದ ಮಹಾದೇವಪ್ಪ, ದೀಪಕ್ ಸಿಂಗ್, ಖಲೀಮ್ ಉಲ್ಲಾ, ಹೆಚ್.ಎಂ. ಮಧು, ಜಿ.ಡಿ. ಮಂಜುನಾಥ್, ವಿಜಯಕುಮಾರ್ ಮುಂತಾದವರಿದ್ದರು.