ಶಿವಮೊಗ್ಗ, ಬಡ ಮಕ್ಕಳಿಗೆ ಶಿಕ್ಷಣ ನೀಡಲು ಹಾಸ್ಟೆಲ್ಗಳಿಂದ ಸಾಧ್ಯವಾಗುತ್ತಿದ್ದು, ಇಲ್ಲಿ ಅಭ್ಯಾಸ ಮಾಡಿದ ಮಕ್ಕಳ ತಮ್ಮ ಜೀವನ ರೂಪಿಸಿಕೊಳ್ಳುತ್ತಾರೆ. ಶಿವಮೊಗ್ಗ ನಗರದ ಈಡಿಗರ ಹಾಸ್ಟೆಲ್ನಲ್ಲಿ ಆರ್ಥಿಕವಾಗಿ ದುರ್ಬಲರಾದ ಮಕ್ಕಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸುವುದು ಎಲ್ಲರ ಅದ್ಯತೆಯಾಗಿದೆ ಎಂದು ಶ್ರೀಕ್ಷೇತ್ರ ಸಿಗಂದೂರು ಧರ್ಮದರ್ಶಿ ಡಾ.ಎಸ್.ರಾಮಪ್ಪ ಅವರು ಹೇಳಿದರು.
ಶಿವಮೊಗ್ಗದ ನಗರದ ಬಾಪೂಜಿ ನಗರದಲ್ಲಿರುವ ಈಡಿಗರ ಹಾಸ್ಟೆಲ್ನಲ್ಲಿ ಶನಿವಾರ ಹಾಸ್ಟೆಲ್ನ ನಾಮಫಲಕ ಅನಾವರಣ ಮಾಡಿ ಅವರು ಮಾತನಾಡಿದರು. ಈಡಿಗರ ಹಾಸ್ಟೆಲ್ ಅನಿವಾರ್ಯ ಕಾರಣದಿಂದ ಮುಚ್ಚಿದ್ದು, ಹಿಂದೆ ಹಾಸ್ಟೆಲ್ ನೋಡಿಕೊಳ್ಳುತ್ತಿದ್ದ ಕುಟುಂಬದ ವಿಶ್ವಾಸ ಪಡೆದು ಮುಂದೆ ಸಮುದಾಯದ ಎಲ್ಲರೂ ಸೇರಿ ಉತ್ತಮವಾಗಿ ನಿರ್ವಹಣೆ ಮಾಡಿಕೊಂಡು ಹೋಗಬೇಕು. ಇಲ್ಲಿ ಮಕ್ಕಳ ಭವಿಷ್ಯ ಉಜ್ವಲವಾಗಬೇಕು. ಸ್ವಚ್ಚತೆ, ಉತ್ತಮ ಆಹಾರ, ಭದ್ರತೆಗೆ ಆದ್ಯತೆ ನೀಡಿ ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಡಾ.ಜಿ.ಡಿ.ನಾರಾಯಣಪ್ಪ ಅವರು ಮಾತನಾಡಿ, ಹಾಸ್ಟೆಲ್ ನಡೆಸುವುದು ಸುಲಭದ ಕೆಲಸವಲ್ಲ.ದೊಡ್ಡ ಸಮಾಜವಿದ್ದು, ಎಲ್ಲರೂ ಸೇರಿ ಕೈಲಾದ ಸಹಾಯ ಮಾಡಿ ಬಡ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.
ಜಿಲ್ಲಾ ಆರ್ಯಈಡಿಗ ಸಂಘದ ಅಧ್ಯಕ್ಷರಾದ ಆರ್.ಶ್ರೀಧರ್ ಹುಲ್ತಿಕೊಪ್ಪ ಅವರು ಮಾತನಾಡಿ, ಯಲ್ಲಮ್ಮ ದಾಸಪ್ಪ ಕುಟುಂಬ ಏಕಾಂಗಿಯಾಗಿ ಇಷ್ಟು ವರ್ಷ ಹಾಸ್ಟೆಲ್ ನಡೆಸಿಕೊಂಡು ಬಂದು ವಿದ್ಯಾದಾನದಂತಹ ಧರ್ಮದ ಕೆಲಸ ಮಾಡಿದೆ. ಅವರು ಸೇವೆ ಅನನ್ಯವಾದುದು. ಅವರ ಕುಟುಂಬವನ್ನು ವಿಶ್ವಾಸಕ್ಕೆ ಪಡೆದು ಅವರು ಹೆಸರು ಅಜರಾಮರವಾಗಿ ಉಳಿಯುವಂತೆ ನೋಡಿಕೊಳ್ಳಲಾಗುವುದು ಎಂದರು.
ಜಿಲ್ಲಾ ಆರ್ಯಈಡಿಗರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಸಿ.ರಾಮಚಂದ್ರ ಅವರು ಮಾತನಾಡಿ, ಈಡಿಗ ಸಮಾಜದ ಮಹಾನ್ ದಾನಿಗಳಾದ ಯಲ್ಲಮ್ಮ ದಾಸಪ್ಪ ಕುಟುಂಬ ಸಹಸ್ರಾರು ವಿದ್ಯಾರ್ಥಿಗಳ ಬಾಳು ಬೆಳಗಿದ್ದಾರೆ. ಅವರನ್ನು ಸ್ಮರಿಸಬೇಕು. ಈ ಹಾಸ್ಟೆಲ್ ಅನ್ನು ಜಿಲ್ಲಾ ಈಡಿಗರ ಸಂಘ ನಡೆಸಲು ಮುಂದಾಗಿದೆ. ಹಾಸ್ಟೆಲ್ ಸಂಘದ ಸುಪರ್ದಿಗೆ ಬರಲು ಉದ್ಯಮಿ ಸುರೇಶ್ ಕೆ. ಬಾಳೇಗುಂಡಿ ಅವರ ಶ್ರಮ ಹೆಚ್ಚಿದೆ. ಅವರಿಂದಾಗಿ ದಾಖಲೆ ಇಂದು ಸಂಘದ ಸುಪರ್ದಿಗೆ ಬಂದಿದೆ ಎಂದು ಹೇಳಿದರು.
ಸಂಘದ ಖಜಾಂಚಿ ಕಾಗೋಡು ರಾಮಪ್ಪ ವಂದಿಸಿದರು. ಉದ್ಯಮಿ ಸುರೇಶ್ ಕೆ.ಬಾಳೆಗುಂಡಿ, ಪ್ರಮುಖರಾದ ವಕೀಲ ಎನ್.ಪಿ.ಧರ್ಮರಾಜ್, ಪ್ರೊ.ಕಲ್ಲನ್, ಆಡಿಟರ್ ರವೀಂದ್ರ, ಉದ್ಯಮಿ ಬ್ಲೂಮನ್ ಮಹೇಶ್, ಜಿ.ಡಿ.ಮಂಜುನಾಥ್, ಎನ್.ಹೊನ್ನಪ್ಪ, ನಿರಂಜನ್ ಕುಪ್ಪಗಡ್ಡೆ, ವಕೀಲ ಕೃಷ್ಣಮೂರ್ತಿ, ಪರಶುರಾಮ್, ತೇಕಲೆ ರಾಜಪ್ಪ, ಉದಯ್ಕುಮಾರ್, ದೇವರಾಜ್ ರೇಚಿಕೊಪ್ಪ ಮತ್ತಿರರು ಹಾಜರಿದ್ದರು.