ಪುಂಜಾಲಕಟ್ಟೆಯ ಪೊಲೀಸ್ ಠಾಣೆಯ ಪಿಎಸ್‌ಐ ಸುಖೇಶ್ ಮತ್ತು ಪೊಲೀಸ್ ಸಿಬ್ಬಂದಿಯವರು ವಕೀಲ ಕುಲದೀಪ್‌ಶೆಟ್ಟಿಯ ಮೇಲೆ ಅಮಾನವೀಯವಾಗಿ ನಡೆದುಕೊಂಡು ವಕೀಲನನ್ನು ಬಂಧಿಸಿ ಹಲ್ಲೆಯನ್ನು ಮಾಡಿದ್ದನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.


ಯಾವುದೇ ಕಾರಣ ನೀಡದೆ ಡಿ.೨ರಂದು ವಕೀಲ ಕುಲದೀಪ್‌ಶೆಟ್ಟಿಯವರನ್ನು ಬಂಧಿಸಿ, ಹಲ್ಲೆ ನಡೆಸಿ ರಾತ್ರಿಯಿಡಿ ಅವರನ್ನು ಬಟ್ಟೆ ಬಿಚ್ಚಿಸಿ ಠಾಣೆಯಲ್ಲಿ ಇರಿಸಿಕೊಂಡು ಹಿಂಸೆ ನೀಡಿದ್ದು, ವಕೀಲ ವೃಂದಕ್ಕೆ ಅವಮಾನವಾಗಿದೆ.

ಮಂಗಳೂರಿನಲ್ಲಿ ವಕೀಲವೃತ್ತಿ ನಡೆಸುತ್ತಿರುವ ಕುಲದೀಪ್ ಶೆಟ್ಟಿಯವರು ಮೂದೂರು ಗ್ರಾಮದ ನೆರೆಹೊರೆಯಲ್ಲಿರುವ ಕೆ.ವಸಂತಗೌಡ ಅವರೊಂದಿಗೆ ಆಸ್ತಿ ವಿವಾದವಿದ್ದು, ಸದರಿ ವಕೀಲರ ಪರವಾಗಿ ನಿರ್ಬಂಧಕಾಜ್ಞೆಯಿದ್ದು, ಈ ಪ್ರಕರಣವು ಸಿವಿಲ್ ಸ್ವರೂಪದ ಪ್ರಕರಣವಾಗಿದ್ದು, ಡಿ.೨ರಂದು ಪುಂಜಾಲಕಟ್ಟೆ ಠಾಣೆ ಪಿಎಸ್‌ಐ ಸುಖೇಶ್ ನೇತೃತ್ವದಲ್ಲಿ ನಾಲ್ವರು ಪೊಲೀಸರು ರಾತ್ರಿ ಸಮಯದಲ್ಲಿ ಏಕಾಏಕಿ ಮನೆಗೆ ನಗ್ಗಿ ವಕೀಲ ಕುಲದೀಪ್‌ಶೆಟ್ಟಿ ಅವರಿಗೆ ಅವಾಚ್ಯವಾಗಿ ಬಯ್ದು ಬರಿಮೈಯಲ್ಲಿ ಜೀಪಿನಲ್ಲಿ ಕರೆದುಕೊಂಡು ಹೋಗಿ ಠಾಣೆಯಲ್ಲಿ ಹಿಂಸೆ ನೀಡಿರುತ್ತಾರೆ.


ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಯಾವುದೇ ವಕೀಲನನ್ನು ಬಂಧಿಸುವ ಪೂರ್ವದಲ್ಲಿ ಪೊಲೀಸರು ನ್ಯಾಯಾಧೀಶರಿಂದ ಅನುಮತಿ ಪಡೆದು ಬಂಧಿಸಬೇಕಾಗಿರುತ್ತದೆ. ಆದರೆ, ಪಿಎಸ್‌ಐ ಮತ್ತು ನಾಲ್ವರು ಪೊಲೀಸರು ಯಾವುದನ್ನು ಲೆಕ್ಕಿಸದೆ ವಕೀಲರ ಮೇಲೆ ಹಲ್ಲೆ ಮಾಡಿದ್ದರಿಂದ ಕೂಡಲೆ ಅವರನ್ನು ಅಮಾನತುಗೊಳಿಸಬೇಕು ಮತ್ತು ಕಾನೂನು ರೀತಿ ಕ್ರಮಕೈಗೊಂಡು ವಕೀಲರಿಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದಲ್ಲಿ ವಕೀಲರ ಸಮೂಹದಿಂದ ಉಗ್ರಪ್ರತಿಭಟನೆಯನ್ನು ನಡೆಸಲಾಗುವುದು ಮತ್ತು ಈ ದೌರ್ಜನ್ಯವನ್ನು ವಕೀಲರ ಸಂಘ ಉಗ್ರವಾಗಿ ಖಂಡಿಸುವುದಾಗಿ ತಿಳಿಸಿದೆ.


ಈ ಸಂದರ್ಭದಲ್ಲಿ ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷರಾದ ಬಿ.ಜಿ.ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಕೆ.ಅಣ್ಣಪ್ಪ, ಖಜಾಂಚಿ ಗಿರೀಶ್ ಎಸ್.ಜಾಧವ್, ಪದಾಧಿಕಾರಿಗಳಾದ ವಿದ್ಯಾರಾಣಿ, ಟೀಕೋಜಿರಾವ್, ಪಿ.ಮಂಜು, ಜಿ.ಅಶೋಕ್, ಡಿ.ಬಿ.ಚಂದ್ರಕುಮಾರ್, ಮಹೇಂದ್ರ ಕುಮಾರ್ ಮೊದಲಾದವರಿದ್ದರು

By admin

ನಿಮ್ಮದೊಂದು ಉತ್ತರ

error: Content is protected !!