ಯುವಕರು ಕ್ರೀಡೆಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ದೈಹಿಕ ಮತ್ತು ಮಾನಸಿಕ ದೃಢತೆ ಸಾಧಿಸಲು ಸಾಧ್ಯವಿದೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ನೆಹರೂ ಮೈದಾನದಲ್ಲಿ ಭಾನುವಾರ ಸಾಗರ್ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಗರ್ ಪ್ರಿಮಿಯರ್ ಲೀಗ್-೨೦೨೨ ಪಂದ್ಯಾವಳಿಯನ್ನು ಉದ್ಘಾಟಿಸಿ ಕ್ರೀಡಾ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಸಾಗರ ಕ್ಷೇತ್ರವನ್ನು ಕ್ರೀಡಾ ವಿಭಾಗದಲ್ಲಿ ಮುಂಚೂಣಿಗೆ ತರುವ ನಿಟ್ಟಿನಲ್ಲಿ ಅಗತ್ಯ ಯೋಜನೆ ರೂಪಿಸಲಾಗಿದೆ. ಒಳಾಂಗಣ ಕ್ರೀಡಾಂಗಣದಲ್ಲಿ ಷಟಲ್ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ವರ್ಷದ ೩೬೫ ದಿನವೂ ವಾಲಿಬಾಲ್ ಆಟವಾಡಲು ಅಗತ್ಯವಾದ ಒಳಾಂಗಣ ಕ್ರೀಡಾಂಗಣವನ್ನು ಮುಂದಿನ ದಿನಗಳಲ್ಲಿ ನಿರ್ಮಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ವಾಲಿಬಾಲ್ ಆಟಗಾರ ಅಚ್ಚುತ್, ರಾಜ್ಯ ವಾಲಿಬಾಲ್ ಆಟಗಾರ ಮುಹೀಬ್ ಅಹ್ಮದ್, ಕ್ರಿಕೇಟ್ ಆಟಗಾರ ತನ್ಮಯ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ಸದಸ್ಯರಾದ ತುಕಾರಾಂ, ಗಣೇಶ್ ಪ್ರಸಾದ್, ಶ್ರೀರಾಮ್, ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ನಾಗೇಶ್, ಯೋಗ ಕೇಂದ್ರದ ಅಧ್ಯಕ್ಷ ಜಿ.ಕೆ.ಕೃಷ್ಣಮೂರ್ತಿ, ಕೀರ್ತಿರಾಜ್, ರಾಘವೇಂದ್ರ, ಅಸ್ಪಾಕ್ ಅಹ್ಮದ್, ಮಹ್ಮದ್ ಹನೀಫ್, ಸುರೇಶ್, ಸೂರಜ್, ವಿಸಾನ್ ಡಿಸೋಜ, ಅಭಿಷೇಕ್ ಹಾಜರಿದ್ದರು