ಅರಣ್ಯಭೂಮಿ ಸಾಗುವಳಿದಾರರ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿರುವ ಸಂಸದ ಬಿ.ವೈ.ರಾಘವೇಂದ್ರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಮಲೆನಾಡು ಭೂ ಹೋರಾಟ ವೇದಿಕೆ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ೯೦ಸಾವಿರಕ್ಕೂ ಹೆಚ್ಚು ಅರಣ್ಯಭೂಮಿ ಸಾಗುವಳಿದಾರರು ಅರ್ಜಿ ಸಲ್ಲಿಸಿ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. ನಾಲ್ಕುಬಾರಿ ಸಂಸದರಾದರೂ ಅರಣ್ಯಭೂಮಿ ಸಾಗುವಳಿದಾರರ ಸಮಸ್ಯೆ ಬಗೆಹರಿಸಲು ವಿಫಲವಾಗಿರುವ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಆ ಸ್ಥಾನದಲ್ಲಿ ಮುಂದುವರೆಯಲು ಅರ್ಹತೆ ಇಲ್ಲ ಎಂದು ಹೇಳಿದರು.
ಬಿ.ಎಸ್.ಯಡಿಯೂರಪ್ಪ ಸಂಸದರಾಗುವ ಮೊದಲು ಅರಣ್ಯಭೂಮಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ಮತ ಪಡೆದಿದ್ದರು. ಆದರೆ ಸಂಸದರಾಗಿ ಬಿ.ಎಸ್.ಯಡಿಯೂರಪ್ಪ ಅರಣ್ಯವಾಸಿಗಳ ಸಮಸ್ಯೆಗೆ ತಾರ್ಕಿಕ ಅಂತ್ಯ ಕಂಡುಕೊಳ್ಳಲು ವಿಫಲವಾಗಿದ್ದಾರೆ.
ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸಹ ಯಡಿಯೂರಪ್ಪ ರಾಜ್ಯದ ಅರಣ್ಯವಾಸಿಗಳ ಸಮಸ್ಯೆ ಬಗೆಹರಿಸಲು ಗಂಭೀರ ಚಿಂತನೆ ನಡೆಸದೆ ಲಕ್ಷಾಂತರ ಅರ್ಜಿಯನ್ನು ವಜಾ ಮಾಡಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಅರಣ್ಯಭೂಮಿ ಸಾಗುವಳಿದಾರರ ಸಮಸ್ಯೆ ಬಗೆಹರಿಸಲು ಕಿಂಚಿತ್ ಆಸಕ್ತಿ ಇಲ್ಲ. ಬಿಜೆಪಿ ಸರ್ಕಾರ ರೈತರ ತಲೆ ಮೇಲೆ ಚಪ್ಪಡಿ ಎಳೆಯುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಶಾಸಕ ಹಾಲಪ್ಪ ಹರತಾಳು ಎಂ.ಎಸ್.ಐ.ಎಲ್. ಅಧ್ಯಕ್ಷರ ಪಾತ್ರ ಮಾತ್ರ ನಿರ್ವಹಿಸುತ್ತಿದ್ದಾರೆಯೇ ಅಥವಾ ಕ್ಷೇತ್ರದ ಶಾಸಕರೂ ಹೌದಾ ಎನ್ನುವ ಅನುಮಾನ ಬರುತ್ತಿದೆ. ತೀ.ನ.ಶ್ರೀನಿವಾಸ್‌ಗೆ ಭೂಮಿ ಇಲ್ಲ, ಭೂಹೀನರ ಬಗ್ಗೆ ಮಾತನಾಡುವ ಹಕ್ಕು ಇಲ್ಲ ಎಂದು ವ್ಯಾಖ್ಯಾನಿಸುವ ಶಾಸಕರಿಗೆ ತಮ್ಮ ಕ್ಷೇತ್ರವ್ಯಾಪ್ತಿಯ ಆನಂದಪುರಂ ಹೋಬಳಿಯ ಸಾವಿರಾರು ಅರಣ್ಯವಾಸಿಗಳಿಗೆ ನೋಟಿಸ್ ನೀಡಿ ಒಕ್ಕಲೆಬ್ಬಿಸುವ ಪ್ರಯತ್ನ
ಮಾಡುತ್ತಿರುವುದು ಬಹುಶ್ಯಃ ಅರಿವಿಗೆ ಬಂದಂತೆ ಕಾಣುತ್ತಿಲ್ಲ. ಅರಣ್ಯಹಕ್ಕು ಮತ್ತು ಶರಾವತಿ ಮುಳುಗಡೆ ಸಂತ್ರಸ್ತರ ಬಗ್ಗೆ ಕಾಂಗ್ರೇಸ್, ಬಿಜೆಪಿ ಸೇರಿದಂತೆ ಯಾವುದೇ ಪಕ್ಷ, ಸಂಘಟನೆ ಹೋರಾಟ ಮಾಡಿದರೂ ಅವರಿಗೆ ನಮ್ಮ ವೇದಿಕೆ ಪೂರ್ಣ ಸಹಕಾರ ನೀಡುತ್ತದೆ. ಜೊತೆಗೆ ಅಗತ್ಯ ಮಾಹಿತಿಯನ್ನು ಕೊಡುತ್ತದೆ ಎಂದರು.
ಗೋಷ್ಟಿಯಲ್ಲಿ ಧರ್ಮೇಂದ್ರ ಶಿರವಾಳ, ಶ್ರೀಧರ ನಾರಗೋಡು, ರಂಗನಾಥ್, ಆದಿ ಸಾಗರ್, ಪ್ರೇಮ್ ಸಿಂಗ್ ಇನ್ನಿತರರು ಹಾಜರಿದ್ದರು.