ಶಿವಮೊಗ್ಗ: ದೀವರ ಸಂಸ್ಕೃತಿಯನ್ನು ಉಳಿಸಿ ಬೆಳಸುವ ಉದ್ದೇಶದಿಂದ ನಿರಂತರ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಧೀರ ದೀವರು ಬಳಗ, ಹಳೆ ಪೈಕ ದೀವರ ಸಂಸ್ಕೃತಿ ಸಂವಾದ ಬಳಗ ಬರುವ ನವೆಂಬರ್ ೨೦ರ ಭಾನುವಾರ ಈಡಿಗರ ಭವನದಲ್ಲಿ ದೀವರ ಸಾಂಸ್ಕೃತಿಕ ವೈಭವ-೨೦೨೨ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಬಳಗದ ಅಧ್ಯಕ್ಷ ಸುರೇಶ್ ಕೆ.ಬಾಳೇಗುಂಡಿ ಇಂದಿಲ್ಲಿ ತಿಳಿಸಿದರು.
ಅವರು ಇಂದು ಬೆಳಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಭೂಮಣ್ಣಿ ಬುಟ್ಟಿ, ಹಸೆ ಚಿತ್ತಾರ ಸ್ಪರ್ಧೆ ಮತ್ತು ಪ್ರದರ್ಶನ, ರಾಜ್ಯಮಟ್ಟದ ಚಿತ್ತಾರಗಿತ್ತಿ ಪ್ರಶಸ್ತಿ ಹಾಗೂ ಧೀರ ದೀವರು ಪುರಸ್ಕಾರ ಸಮಾರಂಭವನ್ನು ಅಂದು ಹೊತ್ತಾರೆ ೧೦ಗಂಟೆಯಿಂದ ಬೈಗು ೪ಗಂಟೆಯ ಸಮಾರೋಪದ ಸಮಾರಂಭದವರೆಗೆ ಆಯೋಜಿಸಲಾಗಿದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೌರಮ್ಮ ಹುಚ್ಚಪ್ಪ ಮಾಸ್ತರ್ ಉದ್ಘಾಟಿಸಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಕ್ಷ್ಮಣ ಕೊಡಸೆ, ಶಾಸಕರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಶಿವಮೊಗ್ಗ ಪಾಲಿಕೆಯ ಉಪಮೇಯರ್ ಲಕ್ಷ್ಮೀ ಶಂಕರ್‌ನಾಯ್ಕ್, ಆರ್ಯ ಈಡಿಗರ ಸಂಘದ ಅಧ್ಯಕ್ಷ ಶ್ರೀಧರ್ ಆರ್.ಹುಲ್ತಿಕೊಪ್ಪ, ಮಹಿಳಾ ಸಂಘದ ಅಧ್ಯಕ್ಷ ಗೀತಾ ದತ್ತಾತ್ರೇಯ ಆಗಮಿಸಲಿದ್ದಾರೆ.
ಹೊತ್ತಾರೆ ೧೧.೩೦ರಿಂದ ಬೈಗು ೩.೩೦ರವರೆಗೆ ಡೊಳ್ಳು, ಕೋಲಾಟ, ಭೂಮಣ್ಣಿ ಹಬ್ಬದ ಹಾಡುಗಳು, ನಾಟಿ ಹಚ್ಚುವ ಪದ, ಬೀಸೊಪದ, ಗೀತಾ ಗಾಯನ, ಅಂಟಿಗೆ ಪಿಂಟಿಗೆ ಹಾಡು, ಭರತನಾಟ್ಯ, ತುಳಸಿಪೂಜೆ ಪದ, ಎಣ್ಣೆ ಅರಿಶಿಣ ಸೋಬಾನೆ ಪದ, ಕೋಲಾಟ, ಜಾನಪದ ನೃತ್ಯ, ದೀವರ ಬಾಷೆಯ ರೂಪಕ, ಮದುವೆ ಹಾಡಿನ ಕಾರ್ಯಕ್ರಮವನ್ನು ವಿವಿಧ ಹೆಸರುವಾಸಿ ಸಂಘ ಸಂಸ್ಥೆಗಳು ನಡೆಸಲಿದ್ದಾವೆ ಎಂದರು.
ಬೈಗು ೪.೦೦ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಜಾನಪದ ಶ್ರೀ.ಪ್ರಶಸ್ತಿ ಪುರಸ್ಕೃತ ಟಾಕಪ್ಪ ಕಣ್ಣೂರು ಸಮಾರೋಪ ಭಾಷಣ ಮಾಡಲಿದ್ದು, ಪ್ರಶಸ್ತಿ ಪ್ರಧಾನವನ್ನು ಮಾಜಿ ಸಚಿವ, ಸಮಾಜವಾದಿ ಚಿಂತಕ ಕಾಗೋಡು ತಿಮ್ಮಪ್ಪ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಮಧು ಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ, ಅರವಿಂದ ಕರ್ಕಿಕೋಡಿ ಆಗಮಿಸಲಿದ್ದು, ಸಮಿತಿಯ ಸಂಚಾಲಕ ನಾಗರಾಜ್ ನೇರಿಗೆ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದ ವೀಕ್ಷಣೆಗೆ ಸರ್ವರೂ ಆಗಮಿಸುವಂತೆ ಸುರೇಶ್ ಕೆ.ಬಾಳೇಗುಂಡಿ ವಿನಂತಿಸಿದರು.
ಧೀರ ದೀವರು ಪ್ರಶಸ್ತಿಯನ್ನು ಈ ವರ್ಷ ಕಾಗೋಡು ಚಳವಳಿಯ ನೇತಾರರಾದ ಮಂಜಮ್ಮ ಗಣಪತಿಯಪ್ಪ ವಾಡ್ನಾಳ್, ಸಮಾಜವಾದಿ ಹೋರಾಟಗಾರ ಬಿ.ಸ್ವಾಮಿರಾವ್, ಪ್ರಖ್ಯಾತ ವೈದ್ಯ ಡಾ.ಜಿ.ಡಿ.ನಾರಾಯಣಪ್ಪ, ವಿಶ್ರಾಂತ ಕುಲಪತಿ ಡಾ.ಎಂ.ಕೆ.ನಾಯ್ಕ್, ಇತಿಹಾಸ ಸಂಶೋಧಕ ಮಧು ಗಣಪತಿ ರಾವ್ ಮಡೆನೂರು ಅವರಿಗೆ ನೀಡಲಾಗುತ್ತದೆ. ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
-ಸುರೇಶ್ ಕೆ.ಬಾಳೇಗುಂಡಿ