ಬೆಂಗಳೂರು: ಕರುನಾಡಿನ ಅಪ್ಪು, ದಿ.ಡಾ. ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ರಾಜ್ಯದಾದ್ಯಂತ ಬಿಡುಗಡೆಗೊಂಡಿದ್ದು, ಎಲ್ಲ ಚಿತ್ರಮಂದಿರಗಳು ಹೌಸ್ ಫುಲ್ ಆಗಿ ದಾಖಲೆ ಬರೆದಿದೆ.
ಇಂದಿಗೆ ಒಂದು ವರ್ಷದ ಹಿಂದೆ ಪುನೀತ್ ರಾಜಕುಮಾರ್ ಕೋಟ್ಯಾಂತರ ಅಭಿಮಾನಿಗಳನ್ನು ಅಗಲಿ ಬಾರದ ಲೋಕಕ್ಕೆ ತೆರಳಿದ್ದರು. ಕರ್ನಾಟಕದ ಪ್ರಾಕೃತಿಕ ವೈಭವವನ್ನು ಜಗತ್ತಿಗೆ ತೋರಿಸುವ ಹಾಗೂ ಪರಿಸರವನ್ನು ಉಳಿಸುವ ಜಾಗೃತಿ ಮೂಡಿಸುವ ಅವರ ಕನಸಿನ ಡಾಕ್ಯುಮೆಂಟರಿಯೇ ಅವರ ಕೊನೆಯ ಚಿತ್ರವಾಯಿತು.
ಇಂದು ರಾಜ್ಯದಾದ್ಯಂತ ಗಂಧದ ಗುಡಿ ಬಿಡುಗಡೆಯಾಗಿದ್ದು, ಬೆಂಗಳೂರು ಒಂದರಲ್ಲೇ 50 ಚಿತ್ರಮಂದಿರದಲ್ಲಿ ಮೊದಲ ಪ್ರದರ್ಶನಗೊಂಡಿದೆ. ಬೆಳಗಿನ ಜಾವ 6 ಗಂಟೆಗೇ 50 ಮಲ್ಟಿಪ್ಲೆಕ್ಸ್’ನಲ್ಲಿ ಚಿತ್ರ ತೆರೆಕಂಡಿರುವುದು ವಿಶೇಷವಾಗಿದ್ದು, ಈ ಮೂಲಕ ಸ್ಯಾಂಡಲ್’ವುಡ್ ಇತಿಹಾದಲ್ಲಿ ಹೊಸ ದಾಖಲೆಯನ್ನೂ ಸಹ ಬರೆದಿದೆ.
ವಿಶೇಷವಾಗಿ ನಿನ್ನೆ ರಾತ್ರಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಪೇಯ್ಡ್ ಪ್ರೀಮಿಯರ್ ಆಯೋಜನೆ ಮಾಡಲಾಗಿತ್ತು. ಪೇಯ್ಡ್ ಪ್ರೀಮಿಯರ್ ಶೋ ಆಯೋಜನೆ ಆಗುತ್ತಿದ್ದಂತೆಯೇ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಖರೀದಿಸಿದ್ದು, ಬಹುತೇಕ ಚಿತ್ರಮಂದಿರಗಳ ಮುಂದೆ ಹೌಸ್ ಫುಲ್ ಬೋರ್ಡ್ ಹಾಕಲಾಗಿತ್ತು. ಇದರಲ್ಲಿಯೇ 25 ಲಕ್ಷ ರೂಪಾಯಿಗೂ ಅಧಿಕ ಹಣ ಬಾಕ್ಸ್ ಆಫೀಸ್ ಕಲೆಕ್ಷನ್ ಆಗಿದೆ ಎನ್ನುವ ಮಾಹಿತಿಯೂ ಇದೆ.
ಬೆಂಗಳೂರಿನಲ್ಲಿ ಅಭಿಮಾನಿಗಳು ಇಂದು ಹಬ್ಬದಂತೆ ಆಚರಣೆ ಮಾಡುತ್ತಿದ್ದು, ಸಾಲು ಸಾಲು ಕಟೌಟ್, ಅನ್ನದಾನ ಸೇರಿದಂತೆ ಹಲವು ರೀತಿಯಲ್ಲಿ ಸಂಭ್ರಮಿಸಿದ್ದಾರೆ.
ಕರ್ನಾಟಕದ ಪ್ರಾಕೃತಿಕ ವೈಭವವನ್ನು ತೋರಿಸುವ ಜೊತೆಯಲ್ಲಿ ಪರಿಸರವನ್ನು ಸಂರಕ್ಷಿಸಬೇಕು ಎಂಬ ಸಂದೇಶ ಹೊತ್ತಿರುವ ಗಂಧದಗುಡಿ ಚಿತ್ರ ವೀಕ್ಷಿಸಿದ ಅಭಿಮಾನಿಗಳು ಇತಿಹಾಸ ಬರೆಯುವಂತಹ ಚಿತ್ರ ಇದಾಗಿದೆ. ಪ್ರತಿಯೊಬ್ಬರೂ ಇದನ್ನು ಚಿತ್ರಮಂದಿರದಲ್ಲೇ ವೀಕ್ಷಿಸಿ, ಅಪ್ಪು ಸಂದೇಶ ಪಾಲಿಸಿ ಎಂಬ ಕರೆಯನ್ನೂ ಸಹ ನೀಡಿದ್ದಾರೆ.