ವಮೊಗ್ಗ: ಹಿಂದೂಗಳ ಏಕತೆ ವೀರ ಸಾವರ್ಕರ್ ಕನಸಾಗಿತ್ತು. ಇಡೀ ದೇಶದಲ್ಲಿ ಹಿಂದುತ್ವದ ಬಗ್ಗೆ ಜಾಗೃತಿ ಉಂಟಾಗಿದೆ ಎಂದು ವೀರ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಹೇಳಿದ್ದಾರೆ.
ಅವರು ಶುಕ್ರವಾರ ಸಂಜೆ ಕೋಟೆ ಶ್ರೀ ಭೀಮೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಮಹಾಸಭಾದ ಪದಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.
ಮುಂಬರುವ ದಿನಗಳಲ್ಲಿ ಹಿಂದೂಗಳ ರಕ್ಷಣೆಗಾಗಿ ಪ್ರತಿಯೊಬ್ಬ ಹಿಂದೂ ಸೈನಿಕನಾಗುವ ಅವಶ್ಯಕತೆ ಇದೆ. ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ ಎಂದರು.
ಸಾವರ್ಕರ್ ಹಿಂದುತ್ವದ ಏಕತೆ ಮತ್ತು ಸಂಘಟನೆಯ ಪ್ರತಿಪಾದನೆ ಮಾಡುತ್ತಾ ಬಂದರು. ಆ ಕಾಲದಲ್ಲಿ ಕೆಲವರು ಅಪಹಾಸ್ಯ ಮಾಡುತ್ತಿದ್ದರು. ಆದರೆ, ಈಗ ಹಿಂದೂ ಧರ್ಮದ ಜಾಗೃತಿ ಉಂಟಾಗಿದ್ದು, ಅವರು ಅಂದು ಹೇಳಿದ್ದು, ಸರಿ ಇದೆ ಎಂದು ಈಗ ಅವರ ಮೊಮ್ಮಗನಾದ ನನಗೆ ಗೌರವದಿಂದ ಕಾಣುತ್ತಿದ್ದಾರೆ. ಗಣೇಶೋತ್ಸವದ ಮೂಲಕ ಹಿಂದೂ ಸಂಘಟನೆಗಳಿಗೆ ಬಲ ತುಂಬುವ ಕಾರ್ಯ ಸಾವರ್ಕರ್ ಮಾಡಿದ್ದರು. ಶಿವಮೊಗ್ಗಕ್ಕೂ ಭೇಟಿ ನೀಡಿ 1944 ರಲ್ಲಿ ಇದೇ ಜಾಗದಲ್ಲಿ ಹಿಂದೂ ಮಹಾಮಂಡಳಿಯ ಸ್ಥಾಪನೆಗೆ ಸ್ಪೂರ್ತಿಯಾಗಿದ್ದರು ಎಂದರು.
ಶರಾಫ್ ಮಂಜುನಾಥ್ ರಾವ್ ಅಧ್ಯಕ್ಷತೆಯಲ್ಲಿ ಅಂದು ಪ್ರಾರಂಭವಾದ ಹಿಂದೂ ಮಹಾಮಂಡಳಿ ಗಣೇಶೋತ್ಸವ ಇಂದು ಕೂಡ ವಿಜೃಂಭಣೆಯಿಂದ ನಡೆಯುತ್ತಿದ್ದು, ರಾಷ್ಟ್ರದ ಗಮನಸೆಳೆಯುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಶ್ರೀಗಂಧ ಮತ್ತು ಸಾಮಗಾನ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವ ಅವಕಾಶ ನನಗೆ ಸಿಕ್ಕಿದೆ. ದೇಶ ಭಕ್ತಿಗಿಂತ ಸಂತೋಷ ತರುವ ವಿಚಾರ ಇನ್ನೊಂದಿಲ್ಲ. ಅಂದು ಗಣೇಶೋತ್ಸವದ ಮೂಲಕ ಪ್ರಾರಂಭವಾದ ಹಿಂದೂ ಜಾಗೃತಿ ಇಂದು ಹೆಮ್ಮರವಾಗಿ ಬೆಳೆದಿದೆ. ಸಾವರ್ಕರ್ ವಿಚಾರಧಾರೆಗೆ ಗೆಲುವು ಲಭಿಸಿದೆ ಎಂದರು.
ಸಿಂಧೂ ನದಿಯ ತೀರದಿಂದ ಕನ್ಯಾಕುಮಾರಿವರೆಗೆ ದೇಶದ ಸಂಸ್ಕೃತಿಯನ್ನು ಬಿಂಬಿಸುವ ಕೆಲಸವನ್ನು ಸಾವರ್ಕರ್ ಮಾಡಿದ್ದರು. ಆದರೆ, ದುರಂತವೆಂದರೆ ಸಿಂಧೂ ನದಿ ತೀರದ ಜನ ಪಾಕಿಸ್ತಾನದ ಪಾಲಾಗಿದ್ದಾರೆ. ಶಿವಾಜಿ ಮಹಾರಾಜರು ಕನಸು ಕಂಡಿದ್ದ ಹಿಂದವೀ ಸಾಮ್ರಾಜ್ಯದ ಕನಸು ನನಸಾಗಬೇಕೆಂಬುದು ನನ್ನ ಆಶಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿವಮೊಗ್ಗದ ಚಿತ್ಪಾವನ ಬ್ರಾಹ್ಮಣ ಸಮಾಜದ ವತಿಯಿಂದ ಸಾತ್ಯಕಿ ಸಾವರ್ಕರ್ ಅವರನ್ನು ಸನ್ಮಾನಿಸಲಾಯಿತು. ಸಾವರ್ಕರ್ ಕೂಡ ಅದೇ ಸಮಾಜದವರಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಬಲಿದಾನವಾದ ಚಿತ್ಪಾವನ ಬ್ರಾಹ್ಮಣ ಮುಖಂಡರನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಹಿಂದೂ ಮಹಾಸಭಾದ ಪ್ರಮುಖರಾದ ಸುರೇಶ್ ಕುಮಾರ್, ಚನ್ನಬಸಪ್ಪ, ಶರಾಫ್ ದತ್ತಾತ್ರಿ, ಶ್ರೀಧರ್, ಪ್ರಭಾಕರ್, ಎನ್.ಆರ್. ಪ್ರಕಾಶ್, ಸತ್ಯನಾರಾಯಣ್, ಹರಿಗೆ ಗೋಪಾಲಸ್ವಾಮಿ, ರಾಜಶೇಖರ್, ನಿರಂಜನ್, ಲಕ್ಷ್ಮಿನಾರಾಯಣ್, ಸತ್ಯನಾರಾಯಣ್ ಮೊದಲಾದವರಿದ್ದರು.
ಸನ್ಮಾನ ಕಾರ್ಯಕ್ರಮದಲ್ಲಿ ಚಿತ್ಪಾವನ ಸಮಾಜದ ಪ್ರಮುಖರಾದ ಹೇಮಂತ್ ಕೇಳ್ಕರ್, ಸದಾಶಿವ ಕೇಳ್ಕರ್, ನಾಗರಾಜ್ ಘೋರೆ, ಭಾಸ್ಕರ್ ಡೋಂಗ್ರೆ, ನಾಗೇಶ್ ಡೋಂಗ್ರೆ ಮೊದಲಾದವರಿದ್ದರು.