ಶಿವಮೊಗ್ಗ, ಅ.೨೧:
ಅಡಿಕೆ ಆಮದು ವಿರೋಧಿಸಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್(ದನಿ) ಅವರ ನೇತೃತ್ವದಲ್ಲಿ ಇಂದು ಹೊಳೆಬೆನವಳ್ಳಿ ಗ್ರಾ.ಪಂ. ಎದುರು ರೈತರು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಭೂತಾನ್ ದೇಶದಿಂದ ಭಾರತಕ್ಕೆ ೧೭ಸಾವಿರ ಟನ್ ಅಡಿಕೆ ಆಮದು ಮಾಡಿಕೊಳ್ಳಲು ನಿರ್ಧಾರ ತೆಗೆದುಕೊಂಡಿದೆ. ಇದು ಅತ್ಯಂತ ಖಂಡನೀಯವಾದುದು. ಕೇಂದ್ರ ಸರ್ಕಾರದ ಈ ತೀರ್ಮಾನದಿಂದ ಅಡಿಕೆ ಬೆಳೆಗಾರರ ಬದುಕು ದುಸ್ತರವಾಗಿದೆ. ಈಗಾಗಲೇ ಅಡಿಕೆ ಬೆಳೆಗಾರರು ಎಲೆಚುಕ್ಕಿ ರೋಗ, ಕೊಳೆರೋಗ, ಅತಿವೃಷ್ಟಿ ಮುಂತಾದ ವುಗಳಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ. ಇಂತಹ ಸಮಯದಲ್ಲಿ ಗಾಯದ ಮೇಲೆ ಬರೆ ಎಂಬಂತೆ ಕೇಂದ್ರ ಸರ್ಕಾರ ಆಮದು ಮಾಡಿಕೊಳ್ಳಲು ಹೊರಟಿರುವುದು ಸರಿ ಯಲ್ಲ ಎಂದು ಪ್ರತಿಭಟನಕಾರರು ದೂರಿದರು.
ಶಿವಮೊಗ್ಗ ತಾಲೂಕು ಸೇರಿದಂತೆ ಜಿಲ್ಲಾದ್ಯಂತ ರೈತರು ಅತಿಹೆಚ್ಚು ಅಡಿಕೆ ಬೆಳೆಯುತ್ತಾರೆ. ಆರ್ಥಿಕಾಭಿವೃದ್ಧಿಯಲ್ಲಿ ಅಡಿಕೆಯ ಪಾತ್ರ ಅತಿಹೆಚ್ಚಾಗಿದೆ. ಆದರೆ ಬಿಜೆಪಿ ಸರ್ಕಾರ ಈಗ ರೈತರ ಕತ್ತು ಹಿಸುಕುವ ಕೆಲಸಕ್ಕೆ ಕೈ ಹಾಕಿದೆ. ಭೂತಾನ್ನಿಂದ ೧೭ಸಾವಿರ ಟನ್ ಹಸಿ ಅಡಿಕೆಯನ್ನು ತೆರಿಗೆ ಇಲ್ಲದೆ ಆಮದು ಮಾಡಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ. ರೈತರು ಸಾಕಷ್ಟು ಕಷ್ಟಪಟ್ಟು ಹಣ ಖರ್ಚು ಮಾಡಿ ಅಡಿಕೆ ತೋಟವನ್ನು ನಿರ್ಮಿಸಿದ್ದಾರೆ. ಈಗ ಆಮದು ನೀತಿಯಿಂದ ಅಡಿಕೆ ಬೆಲೆ ತೀವ್ರ ಕುಸಿಯು ತ್ತಿದೆ. ರೈತರು ಆತಂಕದಲ್ಲಿದ್ದಾರೆ. ಏಕಾಏಕಿ ಕೇಂದ್ರ ಸರ್ಕಾರ ಹಸಿ ಅಡಿಕೆ ಆಮದು ಮಾಡಿಕೊಳ್ಳುತ್ತಿರುವುದನ್ನು ತಕ್ಷಣವೇ ನಿಲ್ಲಿಸ ಬೇಕು ಎಂದರು.
ಪ್ರತಿಭಟನೆಯಲ್ಲಿ ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಆರ್. ವಿಜಯಕುಮಾರ್, ಪ್ರಮುಖರಾದ ನಾಗರಾಜ್, ಅರುಣ್, ರಂಗನಾಥ್ ಮತ್ತಿತರರಿದ್ದರು.