ಜನರಿಗೆ ಭೂಮಿಹಕ್ಕು ಕೊಟ್ಟಿದ್ದೇನೆ. ಕ್ಷೇತ್ರದ ಅಭಿವೃದ್ದಿಗೆ ಅರ್ಹನಿಶಿ ದುಡಿದಿದ್ದೇನೆ. ಆದರೂ ಕ್ಷೇತ್ರದ ಜನರು ಕಳೆದ ಚುನಾವಣೆಯಲ್ಲಿ ನನ್ನನ್ನು ಸೋಲಿಸಿ, ಬೆಂಗಳೂರಿನಲ್ಲಿ ಮದ್ಯದಂಗಡಿ ಇರಿಸಿಕೊಂಡು, ಹಣ ಮಾಡಿದವರಿಗೆ ಮತ ಕೊಟ್ಟು ಗೆಲ್ಲಿಸಿದರಲ್ಲ ಎನ್ನುವ ನೋವು ನನ್ನನ್ನು ಕಾಡುತ್ತಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತೀವೃ ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ಗಾಂಧಿ ಮಂದಿರದಲ್ಲಿ ಶುಕ್ರವಾರ ಬ್ಲಾಕ್ ಕಾಂಗ್ರೇಸ್ ವತಿಯಿಂದ ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ಒಡನಾಡಿಯಾಗಿರುವ ಕಾಗೋಡು ತಿಮ್ಮಪ್ಪ ಅವರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು.
ರಾಜಕೀಯ ಕ್ಷೇತ್ರದಲ್ಲಿ ಅವಿರತವಾಗಿ ಕೆಲಸ ಮಾಡಿರುವ ನಾನು ಹಣ ಮಾಡಿಲ್ಲ. ಜನರ ಹಕ್ಕುಗಳನ್ನು ಕೊಡಿಸುವ ನಿಟ್ಟಿನಲ್ಲಿ ಅಧಿಕಾರ ಇದ್ದಾಗ, ಇಲ್ಲದೆ ಇದ್ದಾಗ ಹೋರಾಟ ಮಾಡಿದ್ದೇನೆ. ಜನರಿಗೆ ಸೌಲಭ್ಯ ಕೊಟ್ಟಿದ್ದೇನೆ. ನಾನು ಅಕ್ರಮ ಮಾಡದೆ ಇರುವುದು, ದುಡ್ಡು ಮಾಡದೆ ಇರುವುದೇ ತಪ್ಪಾಗಿದ್ಯಾ ಎಂದು ಪ್ರಶ್ನಿಸಿದ ಕಾಗೋಡು, ಈಗ ಕ್ಷೇತ್ರದ ಅಭಿವೃದ್ದಿ ನಿಂತ ನೀರಾಗಿದೆ.
ಒಂದೇಒಂದು ಬಗರ್‌ಹುಕುಂ ಹಕ್ಕುಪತ್ರ ಕೊಟ್ಟಿಲ್ಲ, ರಸ್ತೆ ಮಾಡಿಸಿಲ್ಲ. ಗಣಪತಿ ಕೆರೆ ಸ್ವಚ್ಚಗೊಳಿಸಿ, ಮೇಲ್ಭಾಗದಲ್ಲಿ ಬಾವುಟ ನೆಟ್ಟಿದ್ದೆ ಅಭಿವೃದ್ದಿ ಎನ್ನುವಂತೆ ಆಗಿದೆ. ಜನರು ಅಭಿವೃದ್ದಿ ಎಂದರೆ ಯಾವುದು ಎನ್ನುವುದನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಕಾಂಗ್ರೇಸ್ ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸುವ ಪ್ರಯತ್ನ ನಡೆಯಬೇಕಾಗಿದೆ. ಬಡತನ ಮತ್ತು ಹೋರಾಟದ ಮೂಲದಿಂದ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಪಕ್ಷವನ್ನು ಕೇಂದ್ರ ಮತ್ತು ರಾಜ್ಯದಲ್ಲಿ ಸದೃಢಗೊಳಿಸುವ ಶಕ್ತಿ ಹೊಂದಿದ್ದಾರೆ. ಅವರ ಕೈಬಲಪಡಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕಾಂಗ್ರೇಸ್‌ನ ನಿಷ್ಟಾವಂತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಎಲ್ಲರೂ ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಸೋಲಿಲ್ಲದ ಸರದಾರ ಎಂದೆ ಹೆಸರು ಪಡೆದಿರುವ ಖರ್ಗೆ ಅವರ ಅವಧಿಯಲ್ಲಿ ಕಾಂಗ್ರೇಸ್ ಪಕ್ಷ ಮತ್ತೊಮ್ಮೆ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸ ವ್ಯಕ್ತವಾಗುತ್ತಿದೆ. ಕಾಗೋಡು ತಿಮ್ಮಪ್ಪ ಅವರ ಒಡನಾಡಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ಪಕ್ಷನಿಷ್ಟೆಗೆ ಉನ್ನತ ಸ್ಥಾನ ಒಲಿದು ಬಂದಿದೆ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾಂiiದರ್ಶಿ ಡಾ. ರಾಜನಂದಿನಿ ಕಾಗೋಡು ಮಾತನಾಡಿ, ಬಿಜೆಪಿಯಲ್ಲಿ ಸೆಲೆಕ್ಷನ್ ಆದರೆ ಕಾಂಗ್ರೇಸ್‌ನಲ್ಲಿ ಎಲೆಕ್ಷನ್ ಮೂಲಕ ಎಐಸಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾಗಿಲ್ಲ. ಖರ್ಗೆ ಕಾಂಗ್ರೇಸ್ ಸೇನಾನಿ ಮಾತ್ರವಲ್ಲದೆ, ಅಪ್ಪಟ ದೇಶಭಕ್ತರಾಗಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಪಕ್ಷವು ಎಲ್ಲ ಹಂತದಲ್ಲೂ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಆರ್.ಜಯಂತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್, ಪ್ರಮುಖರಾದ ಜ್ಯೋತಿ ಕೋವಿ, ಮಧುಮಾಲತಿ, ಐ.ಎನ್.ಸುರೇಶಬಾಬು, ಗಣಪತಿ ಮಂಡಗಳಲೆ, ಎನ್.ಲಲಿತಮ್ಮ, ಎಸ್.ಲಿಂಗರಾಜ್, ಮಹಾಬಲ ಕೌತಿ, ಡಿ.ದಿನೇಶ್, ಅನ್ವರ್ ಭಾಷಾ ಇನ್ನಿತರರು ಹಾಜರಿದ್ದರು