ಶಿವಮೊಗ್ಗ: ಸರ್ಕಾರಕ್ಕೇ ಕೊಳೆ ರೋಗ ಬಂದಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಲೆನಾಡ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಕೊಳೆ ರೋಗದಿಂದ ಬೆಳೆ ನಾಶವಿರಲಿ, ತೋಟಗಳೇ ವಿನಾಶದತ್ತ ಸಾಗಿವೆ. ರೈತರು ಆತ್ಮಹತ್ಯೆ ದಾರಿ ತುಳಿದಿದ್ದಾರೆ. ತೋಟಗಾರಿಕೆ ಇಲಾಖೆ ಮತ್ತು ತಜ್ಞರು ನೀಡಿದ ಸಲಹೆಗಳು ಔಷಧಿ ಪ್ರಯೋಜನಕ್ಕೆ ಬರುತ್ತಿಲ್ಲ. ಅಡಿಕೆ ಬೆಳೆಗಾರರ ಜೊತೆಗೆ ಕೃಷಿ ಕುಟುಂಬದವರು ಸಂಕಷ್ಟ ಪಡುತ್ತಿದ್ದಾರೆ. ಕೇಂದ್ರ ಮತ್ತು ರಾಝ್ಯ ಸರ್ಕಾರಗಳು ರೈತರ ಹೆಸರಲ್ಲಿ ಅಧಿಕಾರ ಹಿಡಿದು ಈಗ ರೈತರನ್ನೇ ಮರೆತಿದ್ದಾರೆ. ನಿಜವಾಗಿಯೂ ರೋಗ ಬಂದಿರುವುದು ರೈತರನ್ನು ನಿರ್ಲಕ್ಷಿಸಿದ ಸರ್ಕಾರಕ್ಕೆ ಎಂದರು.
ಗಾಯದ ಮೇಲೆ ಬರೆ ಎಂಬಂತೆ ಕೇಂದ್ರ ಸರ್ಕಾರ ಅಡಿಕೆಯನ್ನು ಆಮದು ಮಾಡಿಕೊಳ್ಳಲು ಹೊರಟಿದೆ. ದೇಶೀಯ ಅಡಿಕೆಯೇ ರಫ್ತು ಮಾಡುವಷ್ಟು ಇರುವಾಗ ಭೂತಾನ್ ನಿಂದ ಏಕೆ ಅಡಿಕೆ ಆಮದು ಮಾಡಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಇದರ ಜೊತೆಗೆ ಮಳೆಯ ಸಂಕಷ್ಟದಿಂದ ಅತಿವೃಷ್ಠಿಯಿಂದ ಇಡೀ ರಾಜ್ಯದ ರೈತರು ಬೆಳೆ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರೂ ಅವರ ಕಷ್ಟ ಆಲಿಸಿಲ್ಲ. ಕಳೆದ ವರ್ಷದ ಪರಿಹಾರದ ಹಣವೇ ಇನ್ನೂ ಬಂದಿಲ್ಲ. ಮುಳುಗಡೆ ಪ್ರದೇಶದ ಜನರ ಸಮಸ್ಯೆ ಇನ್ನೂ ಹಾಗೆಯೇ ಉಳಿದಿದೆ. ಮಾತು ಮಾತಿಗೆ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಬಿಜೆಪಿ ಮುಖಂಡರು ಈಗ ಮಾಡುತ್ತಿರುವುದು ಏನು ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ಈಗ ರೈತರ, ಬಡವರ ಕಲ್ಯಾಣ ಬೇಕಾಗಿಲ್ಲ. ಅವರಿಗೆ ಚುನಾವಣೆಯೇ ಮುಖ್ಯವಾಗಿದೆ. ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅಧಿಕಾರದ ಅಮಲು ನೆತ್ತಿಗೇರಿದೆ. ದೇಶ, ರಾಜ್ಯ ದಿವಾಳಿಯತ್ತ ಸಾಗುತ್ತಿದೆ. ಭ್ರಷ್ಟಾಚಾರ ಮುಗಿಲುಮುಟ್ಟಿದೆ., ಮೀಸಲಾತಿ ಬಗ್ಗೆ ಮಾತನಾಡಿರುವುದು ಮೂಗಿಗೆ ತುಪ್ಪ ಹಚ್ಚುವ ಕೆಲಸವಾಗಿದೆ. ಜಿಲ್ಲೆಯಲ್ಲಿ ಮರಳು ಮಾಫಿಯಾ, ಓಸಿ, ಗಾಂಜಾದಂತಹ ಅಕ್ರಮ ಚಟುವಟಿಕೆ ನಿರಂತರವಾಗಿ ನಡೆಯುತ್ತಿವೆ. ಗೃಹ ಸಚಿವರಿಗೆ ಏನು ಗೊತ್ತೇ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರನ್ನು ಹುಡುಕಬೇಕಾಗಿದೆ. ಬಿಜೆಪಿ ಶಾಸಕರು, ಸಂಸದರು ಕೇವಲ ರಾಜಕಾರಣ, ಚುನಾವಣೆಯತ್ತ ಬೀಡುಬಿಟ್ಟಿದ್ದಾರೆ ಎಂದು ದೂರಿದರು.
ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿ ಸಾಗಿದೆ. ಯುವ ಉತ್ಸಾಹಿ ರಾಹುಲ್ ಸುಮಾರು 3300 ಕಿ.ಮೀ. ಪಾದಯಾತ್ರೆ ಕೈಗೊಂಡಿದ್ದಾರೆ. ಬಿಜೆಪಿಯವರಿಗೆ ಇದು ನಿದ್ರೆ ಬರದಂತೆ ಮಾಡಿದೆ. ಯಾತ್ರೆಯ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ರಾಹುಲ್ ಅವರ ಅಂತಃಕರಣ ನೋಡಿ ಎಲ್ಲಾ ವರ್ಗದ ಜನರು ವಿಸ್ಮಯದಿಂದ, ಸಂಭ್ರಮದಿಂದ ನೋಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಾಮೇಗೌಡ, ಹೆಚ್.ಸಿ. ಯೋಗೀಶ್, ಯಮುನಾ ರಂಗೇಗೌಡ, ಚಂದ್ರಶೇಖರ್, ಕೆ.ಎಲ್. ಜಗದೀಶ್, ಲಕ್ಷ್ಮಣಪ್ಪ, ಎನ್.ಡಿ. ಪ್ರವೀಣ್, ರಂಗೇಗೌಡ, ಸಂಜಯ್ ಕಶ್ಯಪ್ ಇದ್ದರು.