ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿಗಳ ಕೆಲ ಅನಾಹುತಗಳು ಅಷ್ಟಿಷ್ಟಲ್ಲ. ನಗರದ ಮುಖ್ಯಪ್ರದೇಶವಾದ ಗಾರ್ಡನ್ ಏರಿಯ ಮೊದಲನೇ ತಿರುವಿನ ಅದರಲ್ಲೂ ಬಿ.ಹೆಚ್. ರಸ್ತೆ ದುರ್ಗಾ ಲಾಡ್ಜ್ ಎದುರಿನ ರಸ್ತೆಯಲ್ಲಿ ವಿದ್ಯುತ್ ಕೇಬಲ್ ಅಳವಡಿಕೆ ವಿಚಾರದಲ್ಲಿ ಕಳೆದ ಆರು ತಿಂಗಳಿನಿಂದ ಕೆಲಸ ಮುಗಿಸದೇ ಎಳೆದಾಡುವ ನೀತಿ ವಿರುದ್ದ ಅಲ್ಲಿನ ವರ್ತಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಮೇ ತಿಂಗಳ ಹೊತ್ತಿನಲ್ಲಿ ಇಲ್ಲಿ ಹಾಕಿದ್ದ ವಿದ್ಯುತ್ ಕೇಬಲ್ ಬ್ಲಾಸ್ಟ್ ಆಗಿತ್ತು. ಈ ಸಂದರ್ಭದಲ್ಲಿ ಅಲ್ಲಿನ ವಿದ್ಯುತ್ ಸಂಪರ್ಕವನ್ನು ಈ ಕೇಬಲ್ ಮೂಲಕ ಕಡಿತಗೊಳಿಸಿ ಮಾಮೂಲಿಯಾಗಿ ಕೊಟ್ಟಿದ್ದರು. ಆಗ ಕೇಬಲ್ ವೈರನ್ನು ನೋಡುವ ಹಾಗೂ ಸರಿಪಡಿಸುವ ಉದ್ದೇಶದಿಂದ ತೆಗೆದ ಚರಂಡಿ ಹಾಗೆಯೇ ಉಳಿದಿದೆ. ಕನಿಷ್ಠ ಪಕ್ಷ ಕೆಲಸವನ್ನು ಮಾಡುತ್ತಿಲ್ಲ. ಕೇಳಿದರೆ ನೋಡುತ್ತೇವೆ, ಮಾಡುತ್ತೇವೆ ಎಂದು ಹೇಳುತ್ತಲೇ ದಿನ ನೂಕುತಿದ್ದಾರೆ.
ಸ್ಮಾರ್ಟ್ ಸಿಟಿಗೆ ಅದರಲ್ಲೂ ಇಂಜಿನಿಯರ್ ಗಳಿಗೆ ಹತ್ತಾರು ಬಾರಿ ದೂರು ನೀಡಲಾಗಿದೆ ಶಿವಮೊಗ್ಗ ಮಹಾನಗರ ಪಾಲಿಕೆಗೆ ಅಲ್ಲಿನ ಆಯುಕ್ತರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಆರು ತಿಂಗಳಿನಿಂದ ಅಂಗಡಿ ಮುಂಗಟ್ಟುಗಳಿಗೆ ಓಡಾಡುವ ವ್ಯವಸ್ಥೆಯೇ ಸರಿ ಇಲ್ಲ. ಇಂತಹ ಕಾರ್ಯದ ವಿರುದ್ಧ ಆ ಭಾಗದ ಜನ ಹಾಗೂ ವರ್ತಕರು ತೀವ್ರವಾಗಿ ಆಕ್ಷೇಪಿಸಿದ್ದಾರೆ. ಈಗಲಾದರೂ ಸರಿಯಾಗುತ್ತಾ?