ಎಲ್ಲ ರಂಗಗಳಲ್ಲಿ ವಿಜ್ಞಾನದ ಅಳವಡಿಕೆ ಅನಿವಾರ್ಯವಾಗಿರುವ ಇಂದಿನ ದಿನಮಾನದಲ್ಲಿ ವಿದ್ಯಾರ್ಥಿಗಳು ಹೊಸ ಹೊಸ ಅನ್ವೇಷಣೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜಕ್ಕೆ ಉಪಯುಕ್ತವಾಗುವ ಕೊಡುಗೆಗಳನ್ನು ನೀಡಬೇಕೆಂದು ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್ ಹೊನ್ನಳ್ಳಿ ಕರೆ ನೀಡಿದರು.

     ಸಾರ್ವಜನಿಕ ಶಿಕ್ಷಣ ಇಲಾಖೆ, ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ, ಆಯುಕ್ತರ ಕಚೇರಿ ಬೆಂಗಳೂರು, ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಬೆಂಗಳೂರು ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಇವರ ಸಂಯುಕ್ತಾಶ್ರಯದಲ್ಲಿ ಇಂದು ಡಯಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯ ಮಟ್ಟದ ವಿಜ್ಞಾನ ವಿಚಾರ ಗೋಷ್ಟಿ ಸ್ಪರ್ಧೆ-22 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಇಂದು ಕೃಷಿ ಆದಿಯಾಗಿ ಎಲ್ಲ ಕ್ಷೇತ್ರಗಳಲ್ಲಿ ವಿಜ್ಞಾನದ ಅಳವಡಿಕೆಯನ್ನು ಕಾಣುತ್ತಿದ್ದೇವೆ. ವಿಜ್ಞಾನ ನಮ್ಮ ಜೀವನದ ಹಾಸುಹೊಕ್ಕಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ನೀವು ವಿಜ್ಞಾನ ಕ್ಷೇತ್ರದಲ್ಲಿ ಹೊಸ ಅನ್ವೇಷಣೆಯಲ್ಲಿ ತೊಡಗಬೇಕು. ಈ ಮೂಲಕ ದೇಶಕ್ಕೆ ಉತ್ತಮ ಕೊಡುಗೆ ನೀಡಬಹುದು ಎಂದ ಅವರು ಹಿಂದಿನ ವಿಜ್ಞಾನಿಗಳು, ಸಾಧಕರು ಯಾವುದೇ ಹೊಸತನ್ನು, ಉಪಯುಕ್ತವಾದುದನ್ನು ಕಂಡುಹಿಡಿಯಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಒಳ್ಳೊಳ್ಳೆ ಕೊಡುಗೆಗಳನ್ನು ನೀಡಿದ್ದಾರೆ. 

     ನಾನು ಹೊಸದಾದ, ಅನುಪಮವಾದ ಮತ್ತು ಉಪಯುಕ್ತವಾದ ಕೊಡುಗೆಯನ್ನು ನೀಡುತ್ತೇನೆಂದು ಮನಸ್ಸು ಮಾಡಿ ವಿದ್ಯಾರ್ಥಿಗಳು ಸಂಶೋಧನೆ ಮತ್ತು ಅನ್ವೇಷಣೆಯಲ್ಲಿ ತೊಡಗಿದಲ್ಲಿ ಅದು ಸಾಧ್ಯವಾಗುತ್ತದೆ. ಮನಸ್ಸು ಮಾಡುವುದು ಅತಿ ಮುಖ್ಯವಾಗಿದ್ದು ತಮ್ಮ ಸಾಧನೆಗೆ ಪೋಷಕರು, ಶಿಕ್ಷಕರು ಮತ್ತು ಸರ್ಕಾರ, ವಿವಿಧ ಸಂಸ್ಥೆಗಳು ಸಹ ಸಹಕಾರ ಒದಗಿಸುವರು. ನಾನು ಸಹ 5 ನೇ ತರಗತಿಯಿಂದ ಸ್ಕಾಲರ್‍ಶಿಪ್‍ನಲ್ಲೇ ಓದಿದ್ದು ಎಂದರು.

     ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಪ್ರಾಂಶುಪಾಲರಾದ ಬಸವರಾಜಪ್ಪ ಎಲ್ಲರನ್ನು ಸ್ವಾಗತಿಸಿ ಮಾತನಾಡಿ, ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಆಯ್ದ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ವಿಜ್ಞಾನ ವಿಚಾರಗೋಷ್ಟ ಸ್ಪರ್ಧೆ ಇಲ್ಲಿ ನಡೆಯುತ್ತಿದ್ದು, ಎಲ್ಲ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾಗುವಂತೆ ಶುಭ ಕೋರಿದರು.

      ವಿಶ್ವೇಶ್ವರಯ್ಯ ತಾಂತ್ರಿಕ ವಸ್ತು ಸಂಗ್ರಹಾಲಯದ ಶಿಕ್ಷಣಾಧಿಕಾರಿ ಮತ್ತು ನೋಡಲ್ ಅಧಿಕಾರಿ ಗೋಪಾಲಕೃಷ್ಣ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇಲಾಖೆ ಉಪನಿರ್ದೇಶಕರಾದ(ಆಡಳಿತ) ಸಿ.ಆರ್.ಪರಮೇಶ್ವರಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

     ಕಾರ್ಯಕ್ರಮದಲ್ಲಿ ಸ್ಪರ್ಧೆಯ ನೋಡಲ್ ಅಧಿಕಾರಿಗಳು ಹಾಗೂ ಹಿರಿಯ ಉಪನ್ಯಾಸಕರಾದ ನಾಗರಾಜ್, ಫಾತಿಮಾ, ರಾಜೀವ್, ತೀರ್ಪುಗಾರರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!