ಶಿವಮೊಗ್ಗ: ಕಳ್ಳತನ ಆರೋಪದ ಮೇಲೆ ಸುಳ್ಳು ದೂರು ದಾಖಲಿಸಿಕೊಂಡು ನನ್ನ ಪತಿ ಕುಮಾರ್ ಅವರಿಗೆ ಪೊಲೀಸರು ಚಿತ್ರಹಿಂಸೆ ನೀಡಿ ಕೈಕಾಲು ಮುರಿದಿದ್ದು, ಓಡಾಡಲು ಆಗುತ್ತಿಲ್ಲ. ಸುಳ್ಳು ಕೇಸ್ ದಾಖಲಿಸಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗಾಯತ್ರಿ ಆರೋಪಿಸಿದರು.

ಅವರು ಇಂದು ಶಿವಮೊಗ್ಗದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜು. 30 ರ ರಾತ್ರಿ ಏಕಾಏಕಿ ಮನೆಗೆ ನುಗ್ಗಿದ ಶಿರಾಳಕೊಪ್ಪ ಪೊಲೀಸರು ಕಳ್ಳತನದ ಆರೋಪದ ಮೇಲೆ ನನ್ನ ಪತಿಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ 12 ದಿನಗಳ ಕಾಲ ಅಜ್ಞಾತ ಸ್ಥಳದಲ್ಲಿಟ್ಟು ನಂತರ ನ್ಯಾಯಾಲಯದಿಂದ 10 ದಿನಗಳ ಕಾಲ ಕಸ್ಟಡಿಗೆ ಪಡೆದು ಹಿಂಸೆ ನೀಡಿದ್ದಾರೆ ಎಂದು ದೂರಿದರು.

5 ಲಕ್ಷ ರೂ. ನೀಡಿದರೆ ನಿನ್ನ ಪತಿಯನ್ನು ಬಿಡುಗಡೆ ಮಾಡುವುದಾಗಿ ಪೊಲೀಸರು ಬೇಡಿಕೆ ಇಟ್ಟಿದ್ದರು. ಅಷ್ಟೊಂದು ಹಣ ನನಗೆ ನೀಡಲು ಆಗದಿದ್ದಾಗ ಈ ವಿಷಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಾಗ ಶಿರಾಳಕೊಪ್ಪ ಪೊಲೀಸರೇ ವಕೀಲರನ್ನು ನನ್ನ ಪರವಾಗಿ ನೇಮಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ. ನಮ್ಮ ಪರವಾಗಿ ರೈತ ಮುಖಂಡ ಸತೀಶ್ ಅವರು ಸಹ ಧ್ವನಿ ಎತ್ತಿದ್ದು ಅವರಿಗೂ ಸಹ ಪೊಲೀಸರು ಕಿರುಕುಳ ನೀಡಿ 1 ಲಕ್ಷ ರೂ. ಪಡೆದಿದ್ದಾರೆ ಎಂದು ಆರೋಪಿಸಿದರು.

ನಡೆಯಲು ಆಗದ ನನ್ನ ಪತಿಯ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಹಾಗೂ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗೃಹ ಸಚಿವರ ನಿವಾಸದ ಮುಂದೆ ಧರಣಿ ನಡೆಸಿ ವಿಷ ಕುಡಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ರೈತ ಮುಖಂಡ ಸತೀಶ್, ಕುಮಾರ್ ಇದ್ದರು.  

By admin

ನಿಮ್ಮದೊಂದು ಉತ್ತರ

error: Content is protected !!