ತೀ.ನಂ.ಶಂ. ನುಡಿನಮನ ಕಾರ್ಯಕ್ರಮ
ಶಂಕರಘಟ್ಟ, ಜೂ. 25:
ಕರ್ನಾಟಕದಲ್ಲಿ ಜಾನಪದ ಅಧ್ಯಯನ ಮತ್ತು ಸಂಶೋಧನೆಗೆ ನಿರ್ದಿಷ್ಟ ಕಾಯಕಲ್ಪ ನೀಡಿದ ಶ್ರೇಯಸ್ಸು ಪ್ರೊ. ತೀ.ನಂ. ಶಂಕರನಾರಾಯಣ ಅವರಿಗೆ ಸಲ್ಲಬೇಕಾಗುತ್ತದೆ ಎಂದು ಕುವೆಂಪು ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ. ಕೇಶವ ಶರ್ಮ ಅಭಿಪ್ರಾಯಪಟ್ಟರು.
ಕುವೆಂಪು ವಿವಿಯ ಕನ್ನಡ ಭಾರತಿ ವಿಭಾಗದಿಂದ ವಿವಿಯ ಬಸವ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪ್ರೊ. ತೀ. ನಂ. ಶಂಕರನಾರಾಯಣ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತೀ. ನಂ. ಶಂ. ತಮ್ಮ ಅಪಾರ ಜಾನಪದ ವಿದ್ವತ್ತನ್ನು ಎಳೆಯ ವಿದ್ಯಾರ್ಥಿ ತಲೆಮಾರಿಗೆ ಆಸಕ್ತಿಯುತವಾಗಿ ತಲುಪಿಸುವ ಮೂಲಕ ಜಾನಪದ ಸಂಶೋಧನಾ ಕ್ಷೇತ್ರವನ್ನು ಶ್ರೀಮಂತಗೊಳಿಸಿದರು. ಅತ್ಯಂತ ಸರಳ ವ್ಯಕ್ತಿತ್ವದ ಜೊತೆಗೆ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿದ್ದ ಅವರು ಸಂಸ್ಥೆಗಳನ್ನು ಕಟ್ಟುವ ಕೆಲಸದಲ್ಲಿ ನಿಸ್ಸೀಮರು ಎಂದರು.
ತೀ.ನಂ. ಶಂ. ಒಡನಾಡಿಯಾಗಿದ್ದ ಡಾ. ಬಸವರಾಜ ನೆಲ್ಲಿಸರ ಮಾತನಾಡಿ ಕುವೆಂಪು ವಿವಿಯಲ್ಲಿ ಜಾನಪದ ಮ್ಯೂಸಿಯಂ ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ಸಾಮಾನ್ಯರಲ್ಲಿ ಸಾಮಾನ್ಯರಾಗಿ ವರ್ತಿಸುತ್ತಿದ್ದ ಅವರು ಹಳ್ಳಿಹಳಿಗೆ, ಮನೆಮನೆಗೂ ತೆರಳಿ ಜಾನಪದ ವಸ್ತುಗಳು ಮತ್ತು ಪರಿಕರಗಳನ್ನು ಸಂಗ್ರಹಿಸಿ ಮ್ಯೂಸಿಯಂ ನಿರ್ಮಿಸಿದರು ಎಂದರು.
ಈ ಸಂಧರ್ಭದಲ್ಲಿ ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ವಿಭಾಗದ ಪ್ರೊ. ಶಿವಾನಂದ ಕೆಳಗಿನಮನಿ, ಪ್ರೊ. ಪ್ರಶಾಂತ ನಾಯಕ್, ಡಾ. ನೆಲ್ಲಿಕಟ್ಟೆ ಸಿದ್ಧೇಶ್ ಮಾತನಾಡಿದರು. ಸಿಂಡಿಕೇಟ್ ಸದಸ್ಯ ರಮೇಶ್ ಬಾಬು ಉಪಸ್ಥಿತರಿದ್ದರು. ವಿವಿಯ ವಿವಿಧ ವಿಭಾಗಗಳ ಅಧ್ಯಾಪಕರು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.