ಕಾನೂನೂ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಆರೋಪಿ ಮೇಲೆ ಫೈರಿಂಗ್ ಮಾಡಿದ ಘಟನೆ ಇಂದು ನಗರದಲ್ಲಿ ನಡೆದಿದೆ.
ಅಪರಾಧ ಪ್ರಕರಣದಲ್ಲಿ ಶಿಕ್ಷೆಯಾದರೂ ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಪಡೆದು ಓಡಾಡುತ್ತಿದ್ದ ಹರ್ಷದ್(30) ಎಂಬಾತನೇ ಗುಂಡಿನ ದಾಳಿಗೆ ಒಳಗಾದವ. ಹರ್ಷದ್ ಅಲಿಯಾಸ್ ಜಾಮೂನು ಸಾರ್ವಜನಿಕರಿಗೆ ಬೆದರಿಕೆ ಹಾಕಿ ದರೋಡೆಗೆ ಯತ್ನಿಸುತ್ತಿದ್ದ ಮಾಹಿತಿ ಮೇರೆಗೆ ಆತನನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆಯೇ ಮಾರಣಾಂತಿಕ ಹಲ್ಲೆಗೆ ಯತ್ನಿಸಿದ್ದಲ್ಲದೇ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದಾನೆ
. ಈ ಸಂದರ್ಭದಲ್ಲಿ ತುಂಗಾನಗರ ಪಿಐ ಮಂಜುನಾಥ್ ತಮ್ಮ ಮತ್ತು ಸಿಬ್ಬಂದಿಗಳ ಆತ್ಮರಕ್ಷಣೆಗಾಗಿ ಆರೋಪಿಗಳ ಬಲಗಾಲಿಗೆ ತಮ್ಮ ಸೇವಾ ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದಾರೆ.
ಗುಂಡೇಟಿನಿಂದ ಗಾಯಗೊಂಡ ಆರೋಪಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೂ. 1ರಂದು ಈತ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಹಣ ನೀಡುವಂತೆ ಚಾಕು ತೋರಿಸಿ ಬೆದರಿಕೆ ಹಾಕಿದ್ದ. ಈ ಬಗ್ಗೆ ತುಂಗಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅನುಪಿನಕಟ್ಟೆ ಬಳಿ ಮಿಂಚಿನ ಕಾರ್ಯಾಚರಣೆ ಮೂಲಕ ಬಂಧಿಸಲು ಹೊರಟಾಗ ಪೊಲೀಸರ ಮೇಲೆ ದಾಳಿ ಮಾಡಿದ್ದ.
ಆರೋಪಿತನಿಗೆ ಈ ಹಿಂದೆ ಮನೆಗಳ್ಳತನ ಮತ್ತು ದರೋಡೆ ಪ್ರಕರಣ ಹಾಗೂ ಮಾರಣಾಂತಿಕ ಹಲ್ಲೆ ಸಂಬಂಧಿಸಿದಂತೆ ಒಟ್ಟು ೫ ಪ್ರಕರಣಗಳಿಗೆ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಸರ್ವೋಚ್ಚ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದು ಮತ್ತೆ ಅಪರಾಧ ಕೃತ್ಯಕ್ಕೆ ಮುಂದಾಗಿದ್ದ ಎನ್ನಲಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.