ರಾಮನಗರ, ಆ.16:
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮೊತ್ತ ಮೊದಲಿಗೆ ಜಾರಿ ಮಾಡುವ ರಾಜ್ಯ ನಮ್ಮದಾಗಲಿದೆ. ಇದಕ್ಕೆ ಪೂರಕವಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಜಿಲ್ಲಾಡಳಿತ ಹಮ್ಮಿಕೊಂಡಿದ್ದ 74ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾದ್ಯಮಗಳಿಗೆ ಈ ಮಾಹಿತಿ ನೀಡಿದ್ದಾರೆ.
ದೇಶದ ದಿಕ್ಸೂಚಿಯನ್ನೇ ಬದಲಿಸುವ ಶಕ್ತಿ ಇರುವ ಹಾಗೂ ಶೈಕ್ಷಣಿಕ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯಕ್ಕೆ ಈ ಹೊಸ ನೀತಿಯೂ ಮತ್ತಷ್ಟು ಬಲ ತುಂಬಲಿದೆ. ಹೀಗಾಗಿ ಈ ನೀತಿಯನ್ನು ಮೊತ್ತ ಮೊದಲು ಅಂಗೀಕರಿಸಿದ ರಾಜ್ಯ ಕರ್ನಾಟಕವೇ ಆಗಿದೆ ಎಂದು ಹೇಳಿದರು.
ಹೊಸ ನೀತಿಯ ಕರಡು ಪ್ರತಿ ಸಿಕ್ಕಿದ ಕೂಡಲೇ ಸರಕಾರ ಇದಕ್ಕೆ ಸಂಬಂಧಿಸಿ ಕಾರ್ಯಪಡೆಯನ್ನು ರಚನೆ ಮಾಡಿತ್ತು. ಕೇಂದ್ರ ನೀತಿಯನ್ನು ಪ್ರಕಟಿಸಿದ ಮೇಲೆ ಕಾರ್ಯಪಡೆ ಜತೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ನೀತಿಯ ಜಾರಿಯ ಬಗ್ಗೆ ಆದಷ್ಟು ಬೇಗ ಈ ಕಾರ್ಯಪಡೆ ವರದಿ ನೀಡಲಿದೆ ಎಂದರು.
ಉನ್ನತ ಶಿಕ್ಷಣದಲ್ಲಿ ಸುಧಾರಣೆ ಪರ್ವ:
ನಮ್ಮ ರಾಜ್ಯವನ್ನು ಕಟ್ಟುವುದರಲ್ಲಿ ಉನ್ನತ ಶಿಕ್ಷಣದ ಪಾತ್ರ ಸಾಕಷ್ಟಿದೆ. ಈ ಕಾರಣಕ್ಕಾಗಿ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲು ಸರಕಾರ ಮುಂದಾಗಿದೆ. ಕಳೆದ ಒಂದು ವರ್ಷದಲ್ಲಿ ಅನೇಕ ಗುರುತರ ಸುಧಾರಣೆಗಳನ್ನು ತರಲಾಗಿದೆ. ಉನ್ನತ ಶಿಕ್ಷಣ ಇಲಾಖೆ ಸಂಪೂರ್ಣ ಗಣಕೀಕರಣಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಣಾ ಕ್ರಮಗಳು ಉನ್ನತ ಶಿಕ್ಷಣ ಇಲಾಖೆಯಲ್ಲಿ ಜಾರಿಗೆ ಬರಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಡಿ.ಮಂಜುನಾಥ್ ಖಂಡನೆ
ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಿನಲ್ಲಿ ಪ್ರಾದೇಶಿಕತೆಯನ್ನು ಹತ್ತಿಕ್ಕಲು ಮತ್ತೊಂದು ಹುನ್ನಾರ ನಡೆಸಿದೆ. ನಮ್ಮ ಭಾಷೆಯಲ್ಲಿ ನಮಗೆ ಶಿಕ್ಷಣ ಪಡೆಯುವ ಹಕ್ಕನ್ನು ಕಸಿದುಕೊಳ್ಳಲು ಮಾಡುತ್ತಿರುವ ವಂಚನಾಕ್ರಮ. ರಾಷ್ಟ್ರೀಯ ಪಕ್ಷಗಳು ಯಾವುದೇ ಇದ್ದರೂ ಅವುಗಳ ಧೋರಣೆ ಒಂದೇ ಆಗಿರುತ್ತವೆ ಅನ್ನೋದಕ್ಕೆ ಬದಲಾವಣೆಯ ಹೆಸರಲ್ಲಿ ಮೋಸಮಾಡುತ್ತಿವೆ. ಕನ್ನಡ ನಮ್ಮ ಭಾಷೆ. ವೈಜ್ಞಾನಿಕ ಭಾಷೆ. ಪೂರ್ವ ಪ್ರಾಥಮಿಕ ದಿಂದ ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ ಎಲ್ಲವನ್ನೂ ಕಲಿಯಲು ಅವಕಾಶ ನೀಡಬೇಕು ಎಂದು ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಜುನಾಥ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಕಾಸಿಗೆ ಓಟುಮಾರಿಕೊಂಡ ಜನರಿಗೆ ಪ್ರಶ್ನೆ ಮಾಡುವ ಹಕ್ಕನ್ನು ಕಳೆದುಕೊಂಡ ಕಾರಣ ದೆಹಲಿ ದೊರೆಗಳ ಮುಂದೆ ಸಾಮಂತರಿಗಿಂತ ಹೀನವಾಗಿ ನಡೆದುಕೊಳ್ಳುವ ರೀತಿಯನ್ನು ನೋಡಿದರೆ ಬೇಸರವಾಗುತ್ತೆ. ರಾಜ್ಯವಾಳುವ ಮಂದಿಗೆ ಪೂಜ್ಯ ಮಹಾತ್ಮಾ ಗಾಂಧಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಗೋಕಾಕ್ ಮಾದರಿ ಚಳುವಳಿ ರೂಪಗೊಳ್ಳಬೇಕು. ಆದರೆ ಎಲ್ಲರೂ ರಾಜಕೀಯ ನಾಯಕರೇ, ಸ್ವಾಭಿಮಾನಿ ಕನ್ನಡತನ ಅವರಲ್ಲಿ ಹುಡುಕಬೇಕು. ಇವರೆಲ್ಲ ನುಸುಳದಂತೆ ಹೋರಾಟ ಕಟ್ಟಬೇಕು. ಅದಕ್ಕೆ ತಮಿಳುನಾಡಿನ ಜನರು, ರಾಜಕಾರಣ ನಮಗೆ ಮಾದರಿಯಾಗಬೇಕು. ಹಿಂದಿ, ಇಂಗ್ಲಿಷ್ ಅಸ್ತಿತ್ವಕ್ಕೆ ಬರುವ ಮುನ್ನ ನಮ್ಮ ಭಾಷೆಗಳು ಪರಿಪಕ್ವ ವಾಗಿತ್ತು. ನಮ್ಮ ಭಾಷೆಗೆ ಶಾಸ್ತ್ರೀಯ ಭಾಷೆಯ ಗೌರವ ದೊರೆತಿರುವುದು ಈ ದೇಶದಲ್ಲಿ ನಮ್ಮ ಗೌರವ ಹೆಚ್ಚಿಸಬೇಕು. ಅದಕ್ಕೆ ರಾಜಕಿಯ ಆತ್ಮಗೌರವ ಹೆಚ್ಚಿಸಬೇಕಾದರೆ ಬದಲಾವಣೆಯ ಗಾಳಿ ಬೀಸಬೇಕು. ಅದಕ್ಕೆ ಚಳುವಳಿ, ಜನಜಾಗೃತಿ ಅಗತ್ಯವಿದೆ. ಆ ಕೆಲಸವಾಗಲು ಸಂಕಲ್ಪವಾಗಬೇಕಿದೆ ಎಂದಿದ್ದಾರೆ.