Site icon TUNGATARANGA

Special News, ಏ. 17ರಿಂದ ಶಿವಮೊಗ್ಗ- ತಿರುಪತಿ ರೈಲು ಪುನರಾರಂಭ: ಬಿವೈ ರಾಘವೇಂದ್ರ

ಮಾರ್ಗ ಬದಲಾಣೆಯೊಂದಿಗೆ ಶಿವಮೊಗ್ಗ-ತಿರುಪತಿ-ಚೆನ್ನೈ ರೈಲು ಪುನರಾರಂಭ – ಸಂಸದ ಬಿ.ವೈ. ರಾಘವೇಂದ್ರ

Tungataranga April 08_2022 | state news
2019-2020 ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ರವರ ಪ್ರಯತ್ನದ ಫಲವಾಗಿ ಶಿವಮೊಗ್ಗ -ರೇಣಿಗುಂಟ (ತಿರುಪತಿ) ಹಾಗೂ ಶಿವಮೊಗ್ಗ-ಬೆಂಗಳೂರು-ಮದ್ರಾಸ್ ಎಕ್ಸಪ್ರೆಸ್ ವಾರಕ್ಕೆ ಎರಡು ಭಾರಿ ಸಂಚರಿಸುವ ರೈಲು ಸೇವೆಗಳನ್ನು ಆರಂಭಿಸಲಾಗಿತ್ತು. ಕೋವಿಡ್ ಸಾಂಕ್ರಾಂಮಿಕ ರೋಗ ಉಲ್ಬಣಗೊಂಡ ಹಿನ್ನೆಲೆಯಲ್ಲಿ ದೇಶದಾದ್ಯಂತ ರೈಲು ಸೇವೆಗಳನ್ನು ನಿಲುಗಡೆ ಮಾಡಿದ ಸಂದರ್ಭದಲ್ಲಿ ಈ ಎರಡು ರೈಲು ಸೇವೆಗಳನ್ನು ಸಹ ರೈಲ್ವೆ ಇಲಾಖೆಯಿಂದ ಹಿಂಪಡೆಯಲಾಗಿತ್ತು.


ಈ ಹಿಂದೆ ಶಿವಮೊಗ್ಗದಿಂದ ತಿರುಪತಿಗೆ ಹೊರಡುವ ರೈಲು ಬೆಳಿಗ್ಗೆ ಶಿವಮೊಗ್ಗದಿಂದ ಹೊರಟು ರಾತ್ರಿ 8 ಗಂಟೆಗೆ ರೇಣಿಗುಂಟವನ್ನು ತಲುಪಿ ಅರ್ಧ ಗಂಟೆಯ ನಂತರ ಕೂಡಲೇ ಶಿವಮೊಗ್ಗಕ್ಕೆ ಮರು ಪ್ರಯಾಣವನ್ನು ಆರಂಭಿಸುತ್ತಿತ್ತು. ಇದರಿಂದಾಗಿ ಮಲೆನಾಡಿನ ಭಾಗದ ಯಾತ್ರಾರ್ಥಿಗಳಿಗೆ ಈ ರೈಲಿನಿಂದ ಹೆಚ್ಚಿನ ಅನುಕೂಲವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ-ಬೆಂಗಳೂರು ಮದ್ರಾಸ್‌ ಎಕ್ಸಪ್ರೆಸ್ ಹಾಗೂ ಶಿವಮೊಗ್ಗ-ರೇಣಿಗುಂಟ (ತಿರುಪತಿ) ರೈಲುಗಳನ್ನು ಒಗ್ಗೂಡಿಸಿ ಶಿವಮೊಗ್ಗದಿಂದ ತಿರುಪತಿ ಹಾಗೂ ಮದ್ರಾಸ್‌ಗೆ ತೆರಳುವ ಯಾತ್ರಾರ್ಥಿಗಳು ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲಿನ ಸಮಯ ಹಾಗೂ ಮಾರ್ಗವನ್ನು ಬದಲಿಸಿ ಶಿವಮೊಗ್ಗ-ರೇಣಿಗುಂಟ-ಮದ್ರಾಸ್ ಎಕ್ಸಪ್ರೆಸ್ ರೈಲು ಸೇವೆಯನ್ನು ಆರಂಭಿಸುವಂತೆ ಮಾನ್ಯ ಸಂಸದ ಬಿ.ವೈ.ರಾಘವೇಂದ್ರರವರು ರೈಲ್ವೆ ಸಚಿವರನ್ನು ಹಲವಾರು ಬಾರಿ ಒತ್ತಾಯಿಸಿದ್ದರು.


ಸಂಸದ ರಾಘವೇಂದ್ರ ಅವರ ಪ್ರಯತ್ನದ ಫಲವಾಗಿ ದಿನಾಂಕ 17-04-2022 ರಿಂದ ಶಿವಮೊಗ್ಗ-ಮದ್ರಾಸ್-ಶಿವಮೊಗ್ಗ (ವಯಾ-ರೇಣಿಗುಂಟ (ತಿರುಪತಿ) ಎಕ್ಸಪ್ರೆಸ್ ರೈಲು ಸೇವೆಯು ಆರಂಭಗೊಳ್ಳುತ್ತಿದೆ.
ಶಿವಮೊಗ್ಗದಿಂದ ಭಾನುವಾರ ಹಾಗೂ ಮಂಗಳವಾರ ಮತ್ತು ಮದರಾಸ್‌ನಿಂದ ಸೋಮವಾರ ಮತ್ತು ಬುಧವಾರಗಳಂದು ಈ ರೈಲು ಸಂಚರಿಸಲಿದೆ.
ವಾರಕ್ಕೆ ಎರಡು ದಿನ ಸಂಚರಿಸುವ ಈ ರೈಲು ಸೇವೆಯು ಶಿವಮೊಗ್ಗದಿಂದ ಸಂಜೆ 7.00 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 8.20 ಗಂಟೆಗೆ ರೇಣಿಗುಂಟವನ್ನು ಹಾಗೂ 11.10 ಕ್ಕೆ ಮದ್ರಾಸ್‌ ತಲುಪುತ್ತದೆ, ಅದೇ ದಿನ ಮದ್ರಾಸ್‌ನಿಂದ ಸಂಜೆ 3.50ಕ್ಕೆ ಹೊರಡುವ ಈ ರೈಲು ರೇಣಿಗುಂಟಕ್ಕೆ ಸಂಜೆ 6.10 ಕ್ಕೆ ತಲುಪಿ ಮರುದಿನ ಬೆಳಿಗ್ಗೆ 7.55ಕ್ಕೆ ಶಿವಮೊಗ್ಗವನ್ನು ತಲುಪಲಿದೆ.


ಮಲೆನಾಡು, ಕರಾವಳಿ ಹಾಗೂ ಶಿವಮೊಗ್ಗ ಭಾಗದ ಜನರು ರೇಣಿಗುಂಟಕ್ಕೆ ಮುಂಜಾನೆ ತಲುಪಿ ಸಂಜೆಯ ವೇಳೆಗೆ ತಿರುಪತಿಯಲ್ಲಿ ದೇವರ ದರ್ಶನ ಪಡೆದು ಅದೇ ದಿನ ರಾತ್ರಿ ಶಿವಮೊಗ್ಗ ಮರುಪ್ರಯಾಣ ಆರಂಭಿಸಲು ಈ ಬದಲಾದ ಸಮಯ ನೆರವಾಗಲಿದೆ. ಈ ಮೊದಲಿನ ರೈಲು ಸೇವೆಯು ಶಿವಮೊಗ್ಗದಿಂದ ಮುಂಜಾನೆ ತನ್ನ ಪ್ರಯಾಣವನ್ನು ಆರಂಭಿಸುತ್ತಿರುವುದರಿಂದ ಶಿವಮೊಗ್ಗದಿಂದ ತಿರುಪತಿಗೆ ತೆರಳಲು ಬಯಸುತ್ತಿದ್ದ ಯಾತ್ರಾರ್ಥಿಗಳು ಇಡೀ ದಿನವನ್ನು ರೈಲಿನಲ್ಲಿ ಕಳೆಯ ಬೇಕಾಗಿತ್ತು. ಬದಲಾದ ಸಮಯದ ಈ ರೈಲು ಸೇವೆಯಿಂದ ರಾತ್ರಿಯ ಪ್ರಯಾಣ(over night)ದ ಮೂಲಕ ತಿರುಪತಿಯನ್ನು ತಲುಪಬಹುದಾಗಿದೆ.
ಈ ರೈಲು ಸೇವೆಯಿಂದ ಮಲೆನಾಡಿನ ಜನತೆಯು ಚಿತ್ರದುರ್ಗ, ಬಳ್ಳಾರಿ, ಗುಂತಕಲ್ ಮೂಲಕ ರೇಣಿಗುಂಟ ಹಾಗೂ ಮದರಾಸಿನೊಂದಿಗೆ ಸಂಪರ್ಕ ಹೊಂದಲು ಸಾಧ್ಯವಾಗಲಿದೆ.
ಈ ರೈಲು ಮಾರ್ಗದಲ್ಲಿ ಭದ್ರಾವತಿ, ತರೀಕೆರೆ, ಬೀರೂರು, ಅಜ್ಜಂಪುರ, ಹೊಸದುರ್ಗ, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಕೂರು, ರಾಯದುರ್ಗ, ಬಳ್ಳಾರಿ, ಗುಂತಕಲ್, ತಾಡಪತ್ರಿ, ಗುತ್ತಿ, ಯರಗುಂಟ, ಕಡಪ, ರಾಯಪೇಟ, ರೇಣಿಗುಂಟ, ಅರಕೋಣಂ, ಪರಂಬೂರ್ ರೈಲು ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿದೆ.
ಈ ರೈಲಿನ ಸೇವೆಯ ಸದುಪಯೋಗವನ್ನು ಪಡೆದುಕೊಳ್ಳಲು ಸಂಸದರು ಶಿವಮೊಗ್ಗ ಹಾಗೂ ಮಲೆನಾಡಿನ ಜನತೆಯಲ್ಲಿ ಈ ಮೂಲಕ ಮನವಿ ಮಾಡಿಕೊಂಡಿರುತ್ತಾರೆ.
ಈ ನೂತನ ರೈಲು ಸೇವೆಯನ್ನು ಆರಂಭಿಸಲು ಕಾರಣರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್‌ರವರು, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರು ಹಾಗೂ ಕರ್ನಾಟಕ ರಾಜ್ಯದ ನಿಕಟ ಪೂರ್ವ ಮುಖ್ಯ ಮಂತ್ರಿಯವರಾದ ಬಿ.ಎಸ್.ಯಡಿಯೂರಪ್ಪರವರಿಗೆ ಹಾಗೂ ಜಿಲ್ಲೆಯ ಶಾಸಕರುಗಳಿಗೆ ಸಂಸದರಾದ ಬಿ.ವೈ. ರಾಘವೇಂದ್ರರವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Exit mobile version