Site icon TUNGATARANGA

ಸರಳ‌ಜೀವನದ ಬಗ್ಗೆ ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಯರಿಗೆ ಸುಧಾಮೂರ್ತಿ ಸಲಹೆ

ಶಿವಮೊಗ್ಗ : ಸರಳ ಜೀವನದ ಜೊತೆ ಉನ್ನತ ಚಿಂತನೆಗೆ ಹೆಚ್ಚಿನ ಒತ್ತು ಕೊಡಬೇಕು. ಹೆಚ್ಚು ಓದಬೇಕು. ನಮ್ಮೆದುರು ಏನಾಗುತ್ತಿದೆ ಎನ್ನುವುದನ್ನು ಅರಿಯಬೇಕು. ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಇರಬೇಕು. ಯಾರು ಇರಲಿ, ಬಿಡಲಿ, ನಮ್ಮ ಕೆಲಸ ನಮಗೆ, ನಿಷ್ಠೆಯಿಂದ ಅದನ್ನು ಪೂರೈಸುವ ಮನಸ್ಸು ಬೆಳೆಸಿಕೊಳ್ಳಬೇಕು ಎಂದು ಇನ್ಫೋಸಿಸ್ ಫೌಂಡೇಶನ್ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಹೇಳಿದರು.


ಇಲ್ಲಿನ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವ ಉಪನ್ಯಾಸ ಮಾಲಿಕೆಯ ೨ನೆಯ ಕಾರ್‍ಯಕ್ರಮವಾಗಿ ಮಂಗಳವಾರ ಸಂಜೆ ಇಲ್ಲಿನ ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಮಹಿಳಾ ಸಬಲೀಕರಣ ಮತ್ತು ಸರಳ ಜೀವನ ಕುರಿತು ಏರ್ಪಡಿಸಲಾಗಿದ್ದ ಸಂವಾದ ಕಾರ್‍ಯಕ್ರಮದಲ್ಲಿ ಅವರು ಮಾತನಾಡಿದರು.
ಜೀವನ ತೆರೆದ ಪುಸ್ತಕವಾಗಬೇಕು. ಜೀವನವನ್ನು ಕಣ್ತೆರೆದು ನೋಡಬೇಕು. ಆಗ ಜೀವನದ ಆಳ-ಅರಿವು ಗೊತ್ತಾಗುತ್ತದೆ. ಮನಸ್ಸಲ್ಲೇ ಪ್ರಯಾಣ ಮಾಡಬೇಕು. ಆಗ ನೈಜತೆ ಅರ್ಥವಾಗುತ್ತದೆ. ಜೀವನ ನೋಡುವ ಮತ್ತು ಅಳೆಯುವ ದೃಷ್ಟಿ ನಮ್ಮದಾಗಬೇಕು ಎಂದರು.


ಮಹಿಳಾ ಸಬಲೀಕರಣ ಗ್ರಾಮೀಣ ಪ್ರದೇಶದಲ್ಲಿ ಅಗತ್ಯವಿದೆ. ಯಾವುದೇ ಕೆಲಸವನ್ನು ಮಾಡುವಾಗ ಮೊದಲು ಅದನ್ನು ಯಶಸ್ವಿಗೊಳಿಸುವ ಮನಸ್ಸು ಮಾಡಬೇಕು. ಧೈರ್‍ಯ ತೆಗೆದುಕೊಳ್ಳಬೇಕು. ಗಟ್ಟಿಯಾದ ನಿರ್ಧಾರ ಮಾಡಬೇಕು. ಇದರಿಂದ ಮಾಡುವ ಕೆಲಸದಲ್ಲಿ ವಿಶ್ವಾಸ ಮೂಡುತ್ತದೆ ಎಂದ ಅವರು, ಆರ್ಥಿಕ ಸ್ವಾತಂತ್ರ್ಯ ಎಂದರೆ ಸಬಲಿಕರಣವಲ್ಲ, ಆರ್ಥಿಕ ಸ್ವಾತಂತ್ರ್ಯ ಬಂದಾಕ್ಷಣ ಕೆಲವರಿಗೆ ಧಿಮಾಕು ಆರಂಭವಾಗುತ್ತದೆ. ಆರ್ಥಿಕ ಸ್ವಾತಂತ್ರ್ಯದ ಜೊತೆ ಹೊಂದಾಣಿಕೆಯ ಜೀವನ ಅಗತ್ಯ. ಇದು ಕೆಲವೊಮ್ಮೆ ದಾರಿತಪ್ಪಿಸುತ್ತದೆ. ಆದ್ದರಿಂದ ಆಥಿಕತೆ ಏನೇ ಇರಲಿ, ಜೀವನ ಮತ್ತು ಕುಟುಂಬದ  ಅರ್ಥವನ್ನು ತಿಳಿದುಕೊಳ್ಳಬೇಕು ಎಂದರು.
ಪ್ರತಿನಿಮಿಷವನ್ನು ಸದ್ಬಳಕೆ ಮಾಡಬೇಕು. ಜೊತೆಗೆ ನಮ್ಮ ಕುಟುಂಬವನ್ನೂ ಅರ್ಥ ಮಾಡಿಕೊಳ್ಳಬೇಕು. ಹೆಣ್ಣು ಸಾಧನೆ ಮಾಡಲು ಹೊರಡುವ ಮುನ್ನ ಕುಟುಂಬದ ಬೆಂಬಲ ಅಗತ್ಯ. ಅದಿದ್ದರೆ ಆಕೆ ಸಾಧನೆ ಮಾಡಬಲ್ಲಳು ಎನ್ನುವ ಮೂಲಕ ತನ್ನ  ಯಶಸ್ಸಿನ ಗುಟ್ಟನ್ನು ಬಹಿರಂಗಗೊಳಿಸಿದ ಅವರು, ಅನಗತ್ಯ ಕಾಲ ಹರಣ ಮಾಡಬಾರದು. ಮೊಬೈಲನ್ನು ಅಗತ್ಯಕ್ಕಿಂತ ಹೆಚ್ಚು ಬಳಸಬೇಡಿ. ಮೊಬೈಲ್ ಜೀವನವಲ್ಲ. ಅದಕ್ಕಿಂತ ಪ್ರಮುಖವಾದುದನ್ನು ನಾವು ಮಾಡಬೇಕಿದೆ, ಇಡಬೇಕದ ಹೆಜ್ಜೆ ಇದೆ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಯಶಸ್ವಿ ಉದ್ಯಮಿಯಾಗಬೇಕಾದರೆ, ಮೊದಲು ಲಾಭ ನಷ್ಟದ ಯೋಚನೆ ಮಾಡಬೇಕು. ಉದ್ಯಮವನ್ನು ಕಟ್ಟುವ ಮಾಹಿತಿ ಹೊಂದಿರಬೇಕು. ಯಶಸ್ಸು ಎನ್ನುವುದು ಯಾವಾಗಲೂ ಶೇ. ೧ರಷ್ಟು ಎನ್ನುವುದನ್ನು ತಿಳಿದುಕೊಳ್ಳಬೇಕು. ಕಠಿಣ ಶ್ರ್ರಮ, ಮಾಡುವ ಉದ್ಯಮದ ಸಮಗ್ರ ಚಿತ್ರಣ, ತಾಳ್ಮೆ, ಸಂಪೂರ್ಣ ತಿಳುವಳಿಕೆ ಮತ್ತು ಗ್ರಾಹಕರೇ ದೇವರು ಎನ್ನುವ ಪರಿಕಲ್ಪನೆಯನ್ನು ಹೊಂದಿರಬೇಕು ಎಂದರು.


ಸಮಾದಲ್ಲಿ ಕಲಿಕೆಯಲ್ಲೂ ಸಹ ಸಮಾನತೆ ಬರಬೇಕಿದೆ. ಗ್ರಾಮೀಣ ಭಾಗದಲ್ಲಿ ಹೆಣ್ಣು-ಗಂಡು ತಾರತಮ್ಯವಿದೆ. ಇದನ್ನು ನಿವಾರಿಸುವ ಕೆಲಸವಾಗಬೇಕು ಎಂದು ಅವರು ಹೇಳಿದರು.


ಪ್ರಾಸ್ತಾವಿಕ ಮಾತನಾಡಿದ ಎನ್‌ಇಎಸ್ ಸಹ ಕಾರ್‍ಯದರ್ಶಿ ಡಾ|| ಪಿ. ನಾರಾಯಣ ಅವರು, ಕನಸು ಕಾಣಬೇಕು. ಅದನ್ನು ಈಡೇರಿಸಬೇಕು ಎನ್ನುವ ಮಾತು ಸುಧಾ ಮೂರ್ತಿ ಅವರಿಗೆ ಅನ್ವಯಿಸುತ್ತದೆ. ಸಮಾಜದ ಅಗತ್ಯತೆಗೆ ಸ್ಪಂದಿಸಿ ಅನೇಕ ನೆರವು ನೀಡಿದ್ದಾರೆ. ವಿದ್ಯಾ ಕ್ಷೇತ್ರದಲ್ಲಿ ಸರಕಾರದ ಜೊತೆ ಕೈಜೋಡಿಸಿ ಹಲವಾರು ಶಾಲೆಗಳಿಗೆ ಮೂಲಸೌಕರ್‍ಯ ಕಲ್ಪಿಸಿದ್ದಾರೆ. ಸಾವಿರಾರು ದೇವದಾಸಿಯರಿಗೆ ಪುನರ್ಜೀವನ ಕೊಟ್ಟಿದ್ದಾರೆ. ಜೀವನ ಮೌಲ್ಯವನ್ನು ಬೆಳೆಸುವ ಕೆಲಸ ಮಾಡುತ್ತ, ಸಮಾಜಕ್ಕೆ ಮಾದರಿಯಾಗಿದ್ದಾರೆ. ಇಂತಹವರ ಬಗ್ಗೆ ಡಾಕ್ಟರೆಟ್ ಮಾಡುವ ಅವಶ್ಯಕತೆ ಇದೆ ಎಂದರು.


ಅಧ್ಯಕ್ಷತೆಯನ್ನು ಎನ್‌ಇಎಸ್ ಅಧ್ಯಕ್ಷ ಜಿ. ಎಸ್. ನಾರಾಯಣ ರಾವ್ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಸಿ. ಆರ್. ನಾಗರಾಜ, ಕಾರ್‍ಯದರ್ಶಿ ಎಸ್.ಎನ್. ನಾಗರಾಜ, ಖಜಾಂಚಿ ಡಿ ಜಿ ರಮೇಶ್, ಕಾಲೇಜಿನ ಪ್ರಾಚಾರ್‍ಯ ಪ್ರೊ. ನಾಗಭೂಷಣ್ ಉಪಸ್ಥಿತರಿದ್ದರು.

Exit mobile version