ಶಿವಮೊಗ್ಗ, ಏ.04:
ಎಲ್ಲಿಗೆ ಬಂತು ಬದುಕು. ಪೊಲೀಸ್ ಠಾಣೆಗಳು ಎಂತೆಲ್ಲಾ ದೂರು ದಾಖಲಿಸಿಕೊಳ್ಳಬೇಕು. ಕೊಲೆ, ಸುಲಿಗೆ, ಅತ್ಯಾಚಾರ,.. ದರೋಡೆಗೆ ಮಾತ್ರ ಸೀಮಿತವಾಗದ ಪೊಲೀಸ್ ಠಾಣೆಗಳಲ್ಲಿ ಈಗೀಗ ಚಿತ್ರ ವಿಚಿತ್ರ ದೂರುಗಳು ದಾಖಲಾಗುತ್ತಿವೆ.
ನಾಯಿಯೊಂದನ್ನು ಕೊಂದ ಪ್ರಕರಣ ಕುಂಸಿ ಪೊಲೀಸ್ ಠಾಣೆಯ ದಾಖಲಾಗಿದ್ದು, ಈ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಹೊಡೆದಾಟ, ಬಡಿದಾಟ ನಡೆದಿದೆ.
ಇಲ್ಲಿನ ಮಂಡಘಟ್ಟದಲ್ಲಿ ಬೈಕ್ ಮೇಲೆ ತೆರಳುತ್ತಿದ್ದ ವಿಜಯ್ ಮತ್ತು ವಾಸುದೇವ್ ಎಂಬುವರಿಗೆ ಸಾಕು ನಾಯಿಯೊಂದು ಅಟ್ಟಿಸಿಕೊಂಡು ಬಂದಿದೆ. ಇನ್ನೇನು ಕಚ್ಚೇ ಬಿಟ್ಟಿತು ಎನ್ನುವಷ್ಟರಲ್ಲಿ ನಾಯಿಯನ್ನ ದೊಣ್ಣೆಯಿಂದ ಹೊಡೆದು ಸಾಯಿಸಲಾಗಿದೆ. ಸಾಯಿಸಿದ ನಾಯಿಯಲ್ಲಿ ಮಂಡಗಟ್ಟದ 3 ನೇ ತಿರುವಿನ ಬಳಿ ಶವವನ್ನ ಬಿಸಾಕಲಾಗಿದೆ.
ಈ ನಾಯಿಯನ್ನ ಮಂಡಘಟ್ಟದ ಮಹೇಶಪ್ಪರ ಮಗ ಹೇಮಂತ್ ಎಂಬುವರು ಎರಡು ವರ್ಷಗಳಿಂದ ತಮ್ಮಮನೆಯಲ್ಲಿ ಸಾಕಿದ್ದರು.
ನಾಯಿ ಸತ್ತಿದ್ದ ವಿಷಯ ತಿಳಿದ ಹೇಮಂತ್ ಕೆಲಸ ಮುಗಿಸಿಕೊಂಡು ಬಂದು ಗ್ರಾಮದ ಮೂರನೇ ಮೈಲಿ ಕಲ್ಲು ಬಳಿ ನೋಡಲು ತೆರಳಿದ್ದಾರೆ. ಈ ವೇಳೆ ನಾಯಿಯ ಬಾಯಿ ಮತ್ತು ಮೂಗಿನಲ್ಲಿ ರಕ್ತ ಸುರಿಯುತ್ತಿರುವುದು, ಬೆನ್ನಿನಲ್ಲಿ ಗಾಯವಾಗಿರುವುದು ಕಂಡು ಬಂದಿದೆ.
ಭಾವನಾತ್ಮಕವಾಗಿ ಆಕ್ರೋಶಗೊಂಡ ಹೇಮಂತ್ ಸೀದ ವಿಜಯ್ ಮನೆಗೆ ಹೋಗಿ ನಾವು ಸಾಕಿದ ನಾಯಿಯನ್ನ ಯಾಕೆ ಸಾಯಿಸಿದ್ದು ಎಂದು ಪ್ತಶ್ನಿಸಿದ್ದಾರೆ. ವಿಜಯ್, ವಾಸುದೇವ್, ರಾಮಚಂದ್ರ ಮತ್ತು ಸುಲೋಚನ ಎಂಬುವರು ಹೇಮಂತ್ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.
ಹೇಮಂತ್ ಗೆ ಕಾಲಿನಿಂದ ಒದ್ದು ಇನ್ನೊಮ್ಮೆ ನಮ್ಮ ಸುದ್ದಿಗೆ ಬಂದರೆ ಸಾಯಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಗ್ರಾಮಸ್ಥರು ಬಂದು ಈ ಜಗಳವನ್ನ ಬಿಡಿಸಿದ್ದಾರೆ. ಹೇಮಂತ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕುಂಸಿ ಠಾಣೆಗೆ ದೂರು ನೀಡಿದ್ದಾರೆ.