ಭದ್ರಾವತಿ,ಆ.09:
ಕೋವಿಡ್-19 ಕರ್ತವ್ಯನಿರತರಾದ ರಾಜ್ಯದ ಎಲ್ಲಾ ಇಲಾಖೆಗಳ ಸರ್ಕಾರಿ ನೌಕರರು ಸೋಂಕಿನಿಂದ ನಿಧನರಾದ ಸಂದರ್ಭದಲ್ಲಿ ವಿಮಾ ಪರಿಹಾರ ಮೊತ್ತವನ್ನು ರಾಜ್ಯ ಸರ್ಕಾರ ಮಂಜೂರು ಮಾಡಲು ಆದೇಶಿಸಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳಿಗೆ ಭದ್ರಾವತಿ ತಾಲ್ಲೂಕು ಸರ್ಕಾರಿ ನೌಕರರ ಸಂಘ ಆತ್ಮೀಯವಾಗಿ ಅಭಿನಂದಿಸಿದೆ.
ಮಾನವೀಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ವಿಶೇಷಾಧಿಕಾರಿ ಹಾಗೂ ಸರ್ಕಾರದ ಉಪ ಕಾರ್ಯದರ್ಶಿ ಪುರುಷೋತ್ತಮ್ ಸಿಂಗ್ ಅವರು ಈ ಆದೇಶವನ್ನು ಹೊರಡಿಸಿದ್ದಾರೆ.
ಇತ್ತೀಚೆಗೆ ರಾಜ್ಯದಲ್ಲಿ ಕೋವಿಡ್ 19 ಸೋಂಕು ವ್ಯಾಪಕವಾಗಿ ಉಲ್ಭಣಿಸುತ್ತಿದ್ದು ರಾಜ್ಯ ಸರ್ಕಾರವು ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಎಲ್ಲಾ ಸರ್ಕಾರಿ ನೌಕರರನ್ನು ಖಾಯಂ ಸೋಂಕು ನಿಯಂತ್ರಣ ಕಾರ್ಯಕ್ಕೆ ನಿಯೋಜಿಸಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯ ನಿರತ ಸರ್ಕಾರಿ ನೌಕರರು ಸೋಂಕಿಗೆ ತುತ್ತಾಗಿ ಅಕಾಲಿಕ ಮರಣ ಹೊಂದುತ್ತಿರುವ ಪ್ರಕರಣಗಳು ಸಹ ಹೆಚ್ಚುತ್ತಿವೆ. ರಾಜ್ಯ ಸರ್ಕಾರಿ ನೌಕರರು ಮತ್ತು ಕುಟುಂಬ ವರ್ಗಕ್ಕೆ ಮಾನಸಿಕವಾಗಿ ಆತ್ಮಸ್ಥೈರ್ಯ ನೀಡುವ ಉದ್ದೇಶದಿಂದ ವಿಮಾ ಪರಿಹಾರ ಮೊತ್ತವನ್ನು ಮಂಜೂರು ಮಾಡುವಂತೆ ಕೋರಿದ್ದ ಹಿನ್ನೆಲೆಯಲ್ಲಿ ಸರ್ಕಾರ ಆದೇಶ ಸಂಖ್ಯೆ ಅಇ 190 ವೆಚ್ಚ 11/ 2020 ರಂತೆ ಪ್ರಸ್ತಾವನೆಯಲ್ಲಿ ವಿವರಿಸಿದ ಕೆಲಸಕ್ಕೆ ನಿಯೋಜನೆಗೊಳ್ಳುವ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಸರ್ಕಾರಿ ನೌಕರರಿಗೆ ವಿಮಾ ಸೌಲಭ್ಯವಿರುತ್ತದೆ.
ಅವರಿಗೆ 30 ಲಕ್ಷ ಪರಿಹಾರ ಒದಗಿಸಲಾಗುವುದು ಮತ್ತು ಸರ್ಕಾರಿ ನೌಕರರು ಕಾರ್ಯದಲ್ಲಿ ಪಾಲ್ಗೊಂಡಿರುವ ಸಮಯದಲ್ಲಿ ಈ ಸಾಂಕ್ರಾಮಿಕ ರೋಗಕ್ಕೆ ಒಳಗಾದಲ್ಲಿ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗುವುದು ಎಂದು ಆದೇಶಿಸಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಾಕ್ಷರಿ ಹಾಗೂ ರಾಜ್ಯ ಪದಾದಿಕಾರಿಗಳು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಕರ್ನಾಟಕ ರಾಜ್ಯ ಸರ್ಕಾರವನ್ನು ಭದ್ರಾವತಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್. ಕೃಷ್ಣಪ್ಪ ಅವರು ಅಭಿನಂದಿಸಿದ್ದಾರೆ.