ಸಾಗರ, ಮಾ.30:
ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಬಾಲಸ್ವಾಸ್ಥ್ಯ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಶರ್ಮದಾ (36) ಗಣಪತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರಂತದ ಘಟನೆ ನಡೆದಿದೆ.
ಮೃತ ಶರ್ಮದಾ ಅವರ ಪತಿ ಸುನೀಲ್ ಭೀಮನ ಕೋಣೆ ಗ್ರಾಮ ಪಂಚಾಯ್ತಿಯಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶರ್ಮದಾ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆತ್ಮಹತ್ಯೆಗೆ ಯಾವ ಕಾರಣ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.
ಮೊನ್ನೆ ರಾತ್ರಿ ಮನೆಯಿಂದ ತಮ್ಮ ಸ್ಕೂಟಿಯಲ್ಲಿ ಗಣಪತಿ ಕೆರೆ ಹತ್ತಿರ ಬಂದು ಬೈಕನ್ನು ಒಂದು ಬದಿ ನಿಲ್ಲಿಸಿ, ಚಪ್ಪಲಿಯನ್ನು ದಂಡೆಯ ಮೇಲೆ ಬಿಚ್ಚಿಟ್ಟು ನೀರಿಗೆ ಹಾರಿದ್ದಾರೆ.
ಈ ಸಂದರ್ಭ ರಸ್ತೆಯಲ್ಲಿ ಹೋಗುತ್ತಿದ್ದವರು ನೀರಿಗೆ ಬಿದ್ದಿದ್ದನ್ನು ಗಮನಿಸಿ ಮೇಲಕ್ಕೆತ್ತಿಕೊಂಡು ಬಂದಾಗ ವೈದ್ಯೆ ಇನ್ನೂ ಉಸಿರಾಡುತ್ತಿದ್ದರು. ತಕ್ಷಣ ಕಾರಿನಲ್ಲಿ ಉಪವಿಭಾಗೀಯ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಚಿಕಿತ್ಸೆ
ಫಲಕಾರಿಯಾಗಿದೆ ಡಾ. ಶರ್ಮದಾ ಮೃತಪಟ್ಟಿದ್ದಾರೆ.
ಆರ್ಯುವೇದಿಕ್ ತಜ್ಞರಾಗಿದ್ದ ಡಾ. ಶರ್ಮದಾ ಕೋವಿಡ್ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡಿ, ಕೋವಿಡ್ ಕೇರ್ ಸೆಂಟರ್ ನಿರ್ವಹಣೆಗೆ ಸನ್ಮಾನಕ್ಕೆ ಸಹ ಭಾಜನರಾಗಿದ್ದರು. ಕೋವಿಡ್ ಲಸಿಕೆ ನೀಡುವ ಸಂದರ್ಭದಲ್ಲಿ ಸಹ ಇವರು ಹಗಲಿರುಳು ಶ್ರಮಿಸಿದ್ದರು.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.