ಶಿವಮೊಗ್ಗ : ಅಸಂಘಟಿತ ಕಾರ್ಮಿಕರಿಗೆ ಮೂಲ ಸೌಲಭ್ಯಗಳನ್ನು ನೀಡಲು ಅನುಕೂಲವಾಗುವಂತೆ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯನ್ನು ಶೀಘ್ರದಲ್ಲಿಯೇ ಸ್ಥಾಪಿಸಬೇಕು ಎಂದು ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ ಆಗ್ರಹಿಸಿದೆ.
ಇಂದು ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಕುಪೇಂದ್ರ ಆಯನೂರು, ಅಸಂಘಟಿತ ಕಾರ್ಮಿಕರ ಸಮಸ್ಯೆಗಳು ಜೀವಂತವಾಗಿವೆ. ಸುಮಾರು ೧೧ ವಲಯ ಗಳನ್ನು ಗುರುತಿಸಲಾಗಿದೆ. ಕಮ್ಮಾರರು, ಕುಂಬಾರರು, ಹಮಾಲರು, ಟೈಲರ್ ಗಳು, ಮೆಕಾನಿಕ್ ಗಳು, ಚಾಲಕರು, ಗೃಹ ಕಾರ್ಮಿಕರು, ಚಿಂದಿ ಆಯುವವರು, ಕ್ಷೌರಿಕರು, ಇವರೆಲ್ಲರೂ ಅಸಂಘಟಿತ ಕಾರ್ಮಿಕರಾಗಿದ್ದು, ಇವರಿಗೆ ಸಂಘಟಿತ ಕಾರ್ಮಿಕರಿಗೆ ಸಿಗುವಂತಹ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಹಳದಿ ಬೋರ್ಡ್ ಸಾರಿಗೆ ವ್ಯವಸ್ಥೆಯಲ್ಲಿ ಇರುವಂತಹ ಸುಮಾರು ೨೫ ಲಕ್ಷ ಚಾಲಕರಿಗೆ, ಮೆಕಾನಿಕ್, ಕ್ಲೀನರ್ ಗಳಿಗೆ ಮೂಲ ಸೌಲಭ್ಯಗಳಿಲ್ಲ. ವಿಮೆ, ಬಸ್ ಪಾಸ್, ಸಾಮಾಜಿಕ ಭದ್ರತೆ ಇಲ್ಲವಾಗಿದೆ. ಇವರೆಲ್ಲರಿಗೂ ಮೂಲ ಸೌಲಭ್ಯ ಕಲ್ಪಿಸಬೇಕು. ಹಾಗೂ ಕೆ.ಎಸ್.ಆರ್.ಟಿ.ಸಿ.ಯಲ್ಲಿ ರಿಯಾಯಿತಿ ದರದ ಬಸ್ ಪಾಸ್ ನೀಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷೆ ಸುರೇಖಾ ಪಾಲಾಕ್ಷಪ್ಪ, ಪದಾಧಿಕಾರಿಗಳಾದ ಕೇಶವಮೂರ್ತಿ ಕೆ, ಪೇಟ್ ಕರ್, ನಿಷ್ಮಾ ರಾಘವೇಂದ್ರ, ಪುಷ್ಪಾ ವಿಶ್ವನಾಥ ಜೆಟ್ಟಿ, ಚೇತನ್, ಸುನಿಲ್, ಶ್ವೇತಾ, ಪದ್ಮಾ ನವೀನ್ ಇದ್ದರು.