ಭದ್ರಾವತಿ: ಗಾಂಜಾ ಮತ್ತು ಮದ್ಯ ಸೇವನೆಯ ಮತ್ತಿನಲ್ಲಿ ಹೋಟೆಲ್ನಲ್ಲಿ ತಿಂದುಂಡು ಬಿಲ್ ಕೊಡದೆ ಪೀಠೋಪಕರಣ ಧ್ವಂಸ ಮಾಡಿ ಮಾಲೀಕನಿಗೆ ಮತ್ತು ಅಡುಗೆ ಭಟ್ಟನಿಗೆ ಹಲ್ಲೆ ಮಾಡಿದ ಗುಂಪು ಕೊನೆಗೆ ಬಾಂಡ್ಲಿಯಲ್ಲಿದ್ದ ಬಿಸಿ ಎಣ್ಣೆಯನ್ನು ಅಡುಗೆ ಭಟ್ಟನ ಮುಖಕ್ಕೆ ಎರಚಿರುವ ಘಟನೆ ಜನ್ನಾಪುರದಲ್ಲಿ ಕಳೆದೆರೆಡು ದಿನಗಳ ಹಿಂದೆ ನಡೆದಿದೆ. ಅಡುಗೆ ಭಟ್ಟ ಮನೋಜ್ಕುಮಾರ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಂಜಾ ಸೇವನೆ ಮಾಡಿ ಜನ್ನಾಪುರದ ಕಮರ್ಷಿಯಲ್ ಸ್ಟ್ರೀಟ್ನಲ್ಲಿರುವ ಮದ್ಯ ಮಾರಾಟದಂಗಡಿ ಮುಂಭಾಗದಲ್ಲಿರುವ ಗರುಡ ಮಿಲ್ಟ್ರಿ ಹೋಟೆಲ್ಗೆ ಬಂದು ಮೂರ್ನಾಲ್ಕು ಯುವಕರು ಗುಂಪು ಕಂಠ ಪೂರ್ತಿ ಮದ್ಯ ಕುಡಿದು, ಮಾಂಸದೂಟ ತಿಂದಿದ್ದಾರೆ. ಬಿಲ್ ಕೇಳಿದಾಗ ಹೋಟೇಲಿನಲ್ಲಿ ಊಟ ಮಾಡುತ್ತಿದ್ದ ಸುರೇಶ ಎಂಬುವನನ್ನು ಥಳಿಸಿದ್ದಾರೆ.
ಆಗ ಹೋಟೆಲ್ ಮಾಲೀಕ ಲೋಹಿತ್ಕುಮಾರ್ ಬಿಡಿಸಲು ಹೋದಾಗ ಕುಡುಕರ ಗುಂಪು ನಿಂದಿಸಿದೆ. ಇದನ್ನು ಕಂಡ ಅಡುಗೆ ಭಟ್ಟ ಮನೋಜ್ ಕುಮಾರ್ ಮಾಲೀಕನಿಗೆ ಸಾಥ್ ನೀಡಿದಾಗ ಬಾಂಡ್ಲಿಯಲ್ಲಿದ್ದ ಬಿಸಿ ಎಣ್ಣೆಯನ್ನು ಆತನ ಮುಖಕ್ಕೆ ಎರಚಿದ್ದಾರೆ.
ಅಡುಗೆ ಭಟ್ಟ ಮನೋಜ್ಕುಮಾರ್ ಮುಖವೆಲ್ಲಾ ಸುಟ್ಟು ಕರಕಲಾಗಿದೆ. ಕಣ್ಣು ತೆರೆಯಲಾಗದೆ ಕಿವಿ ಕೇಳಿಸದೆ ಪರಿತಪಿಸುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ನ್ಯೂಟೌನ್ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೆ ಕೆಲವರ ಬಂಧನಕ್ಕೆ ಬಲೆ ಬೀಸಿದ್ದಾರೆ.