Site icon TUNGATARANGA

ಲೋಕ್ ಅದಾಲತ್ ಮೂಲಕ ಪ್ರಕರಣಗಳ ಶೀಘ್ರ ಇತ್ಯರ್ಥ : ನ್ಯಾ.ಮುಸ್ತಫಾ ಹುಸೇನ್


ಶಿವಮೊಗ್ಗ ಮಾರ್ಚ್ 12( ಕರ್ನಾಟಕ ವಾರ್ತೆ)
ರಾಷ್ಟ್ರೀಯ ಲೋಕ ಅದಾಲತ್ ಮೂಲಕ ಜನ ಸಾಮಾನ್ಯರ ಸಿವಿಲ್, ವ್ಯಾಜ್ಯಪೂರ್ವ ಮತ್ತು ಇತರೆ ಪ್ರಕರಣಗಳನ್ನು ಗುರುತಿಸಿ ರಾಜೀ ಸಂಧಾನದ ಮೂಲಕ ಶೀಘ್ರವಾಗಿ ಮತ್ತು ಸುಲಭವಾಗಿ ಇತ್ಯರ್ಥಪಡಿಸಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ್ ಎಸ್.ಎ ತಿಳಿಸಿದರು.


ಜಿಲ್ಲಾ ನ್ಯಾಯಾಲಯದಲ್ಲಿ ಇಂದು ಆಯೋಜಿದ್ದ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಲೋಕ್‍ಆದಾಲತ್ ಮೂಲಕ ಜನ ಸಾಮಾನ್ಯರ ಪ್ರಕರಣಗಳನ್ನು ಬಗೆಹರಿಸಿ ಸೂಕ್ತ ಪರಿಹಾರ ನೀಡಲು ಸರ್ಕಾರ ರೂ.818 ಕೋಟಿ ಬಿಡುಗಡೆ ಮಾಡಿದ್ದು, ರಾಜೀ ಆಗಬಹುದಾದಂತಹ ವ್ಯಾಜ್ಯಗಳನ್ನು ಶೀಘ್ರವಾಗಿ ಪರಿಹರಿಸಿ ಹೆಚ್ಚಿನ ಗುರಿ ಸಾಧಿಸಲು ವಕೀಲರು ಕೂಡ ಗಮನಹರಿಸಬೇಕು ಎಂದರು.
ಸೊರಬ ನ್ಯಾಯಾಲಯದಲ್ಲಿ 16/04/2019 ರಂದು ಅಪಘಾತದಲ್ಲಿ ಮೃತ ಪಟ್ಟ ವ್ಯಕ್ತಿಯ ಕುಟುಂಬಕ್ಕೆ ನ್ಯೂ ಇಂಡಿಯ ಇನ್ಶೂರೆನ್ಸ್ ಕಂಪನಿ ಮೂಲಕ ರೂ.70ಲಕ್ಷ ಪರಿಹಾರವನ್ನ ಸೊರಬ ನ್ಯಾಯಾಲಯ ಒದಗಿಸಿದೆ ಎಂದು ಮಾಹಿತಿ ನೀಡಿದರು.
ವಕೀಲರ ಸಂಘದ ಅಧ್ಯಕ್ಷರಾದ ದೇವೇಂದ್ರಪ್ಪ ಮಾತನಾಡಿ, ಲೋಕ್‍ಅದಾಲತ್ ಮೂಲಕ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಶೀಘ್ರವಾಗಿ ಬಗೆಹರಿಸಬೇಕು ಎಂದು ಹೇಳಿದರು.


ಇದೇ ಸಂದರ್ಭದಲ್ಲಿ 28 ವರ್ಷದ ಜೂನಿಯರ್‍ಇಂಜಿನಿಯರ್ ತಿಪ್ಪೇಸ್ವಾಮಿ ಎಂಬ ಯುವಕ
ದಿ.20-11-2019 ರಂದು ಬೆಂಗಳೂರಿನಲ್ಲಿ ಬೈಕ್ ಮತ್ತು ಲಾರಿಗಳ ನಡುವೆ ಅಪಘಾತ ಸಂಭವಿಸಿ ಮೃತ ಪಟ್ಟಿದ್ದು ಅವರ ಕುಂಟುಂಬಕ್ಕೆ ನ್ಯೂ ಇಂಡಿಯಾ ಇನ್ಶೂರೆನ್ಸ್ ಕಂಪನಿಯು ರೂ.25 ಲಕ್ಷ ಚೆಕ್ ವಿತರಿಸಿತು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸರಸ್ವತಿಕೆ.ಎನ್, ಹಿರಿಯ ನ್ಯಾಯಾಧೀಶರು, ಕಿರಿಯ ನ್ಯಾಯದೀಶರು, ವಕೀಲರು ಸೇರಿದಂತೆ ಮತ್ತಿತರರು ಹಾಜರಿದ್ದರು.

ಇಂದಿರಾ ರಾಷ್ಟ್ರೀಯ ಮುಕ್ತ ವಿವಿ: ಪದವಿ ಪ್ರವೇಶ ಪ್ರಾರಂಭ https://tungataranga.com/?p=9282


12,287 ಪ್ರಕರಣಗಳ ಸಂಧಾನ : ಶನಿವಾರದಂದು ನಡೆದ ಲೋಕ ಅದಾಲತ್‍ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿ ಬಾಕಿ ಇದ್ದ ವಿವಿಧ ಸ್ವರೂಪದ 12,287 ಪ್ರಕರಣಗಳನ್ನು ಹಾಗೂ 241 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ ಒಟ್ಟು 12528 ಪ್ರಕರಣಗಳನ್ನು ರಾಜೀ ಸಂಧಾನ ಮಾಡಿಸುವ ಮೂಲಕ ಇತ್ಯರ್ಥಪಡಿಸಲಾಯಿತು.
ಪ್ರಕರಣಗಳನ್ನು ರಾಜೀ ಮಾಡಿಸಲು ಶಿವಮೊಗ್ಗದಲ್ಲಿ 15 ಪೀಠಗಳು, ಭದ್ರಾವತಿಯಲ್ಲಿ 7, ಹೊಸನಗರದಲ್ಲಿ 02, ಸಾಗರದಲ್ಲಿ 04, ಶಿಕಾರಿಪುರದಲ್ಲಿ 04, ಸೊರಬದಲ್ಲಿ 03 ಹಾಗೂ ತೀರ್ಥಹಳ್ಳಿಯಲ್ಲಿ 04 ಪೀಠಗಳನ್ನು ರಚಿಸಲಾಗಿತ್ತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ್ ಎಸ್.ಎ ಇವರ ಮಾರ್ಗದರ್ಶನದಲ್ಲಿ ರಾಜೀ ಸಂಧಾನ ಮಾಡಲಾಯಿತು.
ಲೋಕ ಅದಾಲತ್‍ನಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಧೀಶರು, ವಿವಿಧ ವಿಮೆ ಕಂಪೆನಿಯ ಹಾಗೂ ಬ್ಯಾಂಕ್ ಅಧಿಕಾರಿಗಳು, ಪ್ಯಾನಲ್ ವಕೀಲರು, ಅರ್ಜಿದಾರರ ಪರ ವಕೀಲರು ಹಾಗೂ ಕಕ್ಷಿದಾರರು ಸಕ್ರಿಯವಾಗಿ ಭಾಗವಹಿಸಿದ್ದರು.

ಹೊಟ್ಟೆನೋವಿನ ಚಿಕಿತ್ಸೆ ಫಲಕಾರಿಯಾಗದೇ ನವ ವಿವಾಹಿತೆ ಸಾವು.., ದುರಂತದ ಘಟನೆ ನಡೆದದ್ದೆಲ್ಲಿ ಗೊತ್ತಾ….? https://tungataranga.com/?p=9262

ಈ ಲೋಕ್ ಅದಾಲತ್ ಜಿಲ್ಲೆಯಲ್ಲಿ ಯಶಸ್ವಿಯಾಗಿ ಜರುಗಿಸಲು ನ್ಯಾಯಾಂಗ ಇಲಾಖೆಗೆ ಸಹಕರಿಸಿದ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ನ್ಯಾಯವಾದಿಗಳ ಸಂಘ, ಸರ್ಕಾರಿ ಅಭಿಯೋಜಕರು, ಸಿಬ್ಬಂದಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಮುಸ್ತಫಾ ಹುಸೇನ್ ಎಸ್.ಎ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎನ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.’

Exit mobile version