Site icon TUNGATARANGA

ಸಿಹಿಮೊಗೆಯಲ್ಲಿ ಮಳೆ ಮೆರಗು

ಶಿವಮೊಗ್ಗ: ಸತತ ಮೂರು ದಿನಗಳಿಂದ ಕರಾವಳಿ ಹಾಗೂ ಮಲೆನಾಡಿನಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಒಟ್ಟು ೬೭೪.೮೮ ಮಿಮಿ ಮಳೆಯಾಗಿದ್ದು, ಸರಾಸರಿ ೯೬.೪೧ ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ ೪೧೭.೮೭ ಮಿಮಿ ಇದ್ದು, ಇದುವರೆಗೆ ಸರಾಸರಿ ೨೦೩.೩೧ ಮಿಮಿ ಮಳೆ ದಾಖಲಾಗಿದೆ.
ಶಿವಮೊಗ್ಗ ೪೪.೬೦ ಮಿಮಿ., ಭದ್ರಾವತಿ ೩೫.೬೦ ಮಿಮಿ., ತೀರ್ಥಹಳ್ಳಿ ೧೯೧.೬೦ ಮಿಮಿ., ಸಾಗರ ೬೪.೦೮ ಮಿಮಿ., ಶಿಕಾರಿಪುರ ೩೪.೬೦ ಮಿಮಿ., ಸೊರಬ ೮೬.೨೦ ಮಿಮಿ. ಹಾಗೂ ಹೊಸನಗರ ೨೧೮.೨೦ ಮಿಮಿ. ಮಳೆಯಾಗಿದೆ.
ಶಿವಮೊಗ್ಗ ತೀರ್ಥಹಳ್ಳಿ ಹೊಸನಗರ ಸೇರಿದಂತೆ ಹಲವು ಭಾಗಗಳಲ್ಲಿ ಸತತ ಮೂರು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಭಾರಿ ಮಳೆಗೆ ಕೆಲವೆಡೆ ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗುರುಳಿದ್ದು, ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ.


ಶಿವಮೊಗ್ಗ ಗಾಜನೂರು ಡ್ಯಾಂನ ಎಲ್ಲ ಕ್ರೆಸ್ ಗೇಟ್‌ಗಳನ್ನು ತೆಗೆದು ನದಿಗೆ ೪೫ ಸಾವಿರ ನೀರನ್ನು ಹೊರಬಿಡಲಾಗುತ್ತಿದೆ.

ಜೋಗ ಜಲಪಾತಕ್ಕೆ ಮೆರುಗು: ಹೊಸನಗರ ತಾಲ್ಲೂಕಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಶರಾವತಿ ನದಿ ನೀರಿನ ಒಳಹರಿವು ಹೆಚ್ಚಾದ ಕಾರಣ ವಿಶ್ವವಿಖ್ಯಾತ ಜೋಗ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತಿದೆ.
ಕೋಡಿಬಿದ್ದ ಅಂಜನಾಪುರ ಜಲಾಶಯ: ಸತತ ೩ ದಿನಗಳಿಂದ ರಿಪ್ಪನ್‌ಪೇಟೆ, ತೀರ್ಥಹಳ್ಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯ ಮಂಗಳವಾರ ಕೋಡಿ ಬಿದ್ದಿದೆ.


ಮುಳುಗಿದ ಮಂಟಪ:
ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ನದಿ ಮೈದುಂಬಿ ಹರಿಯುತ್ತಿದ್ದು, ಕೋರ್ಪಳಯ್ಯನ ಛತ್ರದ ಬಳಿಯಿರುವ ಮಂಟಪ ಇಂದು ಮುಳುಗಿದೆ.

Exit mobile version