Site icon TUNGATARANGA

ಶಿವಗಂಗಾ ಯೋಗಕೇಂದ್ರದಲ್ಲಿ 12 ಅಡಿ ಶಿವನ ಮೂರ್ತಿ ಸ್ಥಾಪನೆಗೆ ಬಿ.ಎಸ್.ಯಡಿಯೂರಪ್ಪ ಅವರಿಂದ ಭೂಮಿಪೂಜೆ

ಶಿವಮೊಗ್ಗ: ನಗರದ ಕಲ್ಲಳ್ಳಿಯಲ್ಲಿರುವ ಶಿವಗಂಗಾ ಯೋಗಕೇಂದ್ರದ ಸಭಾಂಗಣದಲ್ಲಿ 12 ಅಡಿ ಎತ್ತರದ ವಿಶೇಷ ಧ್ಯಾನ ಶಿವನ ಮೂರ್ತಿ ಸ್ಥಾಪನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೂಮಿಪೂಜೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಿವಮೊಗ್ಗ ನಗರದಲ್ಲಿ ಇರುವ ಶಿವಗಂಗಾ ಯೋಗಕೇಂದ್ರವು ರಾಜ್ಯದಲ್ಲಿಯೇ ಮಾದರಿಯಾದ ಯೋಗಕೇಂದ್ರ ಆಗಿದ್ದು, ಎಲ್ಲರಿಗೂ ಸ್ಫೂರ್ತಿ ಆಗುವಂತೆ ಯೋಗಕೇಂದ್ರ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.
ಶಿವಗಂಗಾ ಯೋಗಕೇಂದ್ರ ಇದೀಗ 12 ಅಡಿ ಎತ್ತರದ ವಿಶೇಷವಾಗಿರುವಂತೆ ಧ್ಯಾನ ಶಿವನ ಮೂರ್ತಿ ನಿರ್ಮಾಣ ಮಾಡಲು ಮುಂದಾಗಿರುವುದು ಒಳ್ಳೆಯ ಕಾರ್ಯ. ಯೋಗಪಟುಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತ ಮುನ್ನಡೆಯುತ್ತಿರುವ ಸಂಸ್ಥೆಯು ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಶುಭಹಾರೈಸಿದರು.


ಶಿವಗಂಗಾ ಯೋಗಕೇಂದ್ರದ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ ಮಾತನಾಡಿ, ಅಭಿವೃದ್ಧಿಯ ಹರಿಕಾರ, ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಹಕಾರದಿಂದ ಯೋಗಕೇಂದ್ರ ನಡೆಯುತ್ತಿದ್ದು, ಶಿವಗಂಗಾ ಯೋಗಕೇಂದ್ರಕ್ಕೆ ಸ್ಥಳ ಮಂಜೂರು ಮಾಡಿ ಕೇಂದ್ರ ಸ್ಥಾಪನೆಗೆ ಮೂಲ ಕಾರಣ ಬಿ.ಎಸ್.ಯಡಿಯೂರಪ್ಪ ಆಗಿದ್ದಾರೆ. ಬಿಎಸ್‌ವೈ ಅವರ ಸಹಕಾರ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಶಿವಗAಗಾ ಯೋಗಕೇಂದ್ರವು 23 ಕೇಂದ್ರಗಳಲ್ಲಿ ಸಾವಿರಾರು ಜನರಿಗೆ ಪ್ರತಿ ನಿತ್ಯ ಯೋಗ ತರಬೇತಿ ನೀಡುತ್ತಿದೆ. ಈವರೆಗೂ ಲಕ್ಷಾಂತರ ಜನರು ಯೋಗಕೇಂದ್ರದ ಸದುಪಯೋಗ ಪಡೆದುಕೊಂಡು ಯೋಗ ಅಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಶಿವಗಂಗಾ ಯೋಗಕೇಂದ್ರದ ವತಿಯಿಂದ ಸನ್ಮಾನಿಸಿ ಜನ್ಮದಿನದ ಶುಭಾಶಯಗಳನ್ನು ತಿಳಿಸಲಾಯಿತು.


ಶಿವಗಂಗಾ ಯೋಗಕೇಂದ್ರದ ಕಾರ್ಯದರ್ಶಿ ಎಸ್.ಎಸ್.ಜ್ಯೋತಿಪ್ರಕಾಶ್, ಟ್ರಸ್ಟಿ ಹಾಲಪ್ಪ, ಮಹಾನಗರ ಪಾಲಿಕೆ ಸದಸ್ಯೆ ಅನಿತಾ ರವಿಶಂಕರ್, ಓಂಕಾರ್ ಕುಮಾರ್, ವಿಜಯ ಬಾಯರ್, ಮಹೇಶ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಯೋಗ ಶಿಕ್ಷಕರು ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.

Exit mobile version