ಪ್ರತ್ಯೇಕ ಹಾಲು ಒಕ್ಕೂಟ, ಜೋಗದಲ್ಲಿ ತಾರಾ ಹೋಟೆಲ್!
ಬೆಂಗಳೂರು:
ಶಿವಮೊಗ್ಗ ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಪ್ರತ್ಯೇಕ ಹಾಲು ಒಕ್ಕೂಟಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಜೆಟ್’ನಲ್ಲಿ ಈ ಕುರಿತಂತೆ ಘೋಷಣೆ ಮಾಡಿರುವ ಅವರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರಿಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಮಾಡಲಾಗುವುದು. ಹಾವೇರಿಯಲ್ಲಿ ೧ ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪಿಸಲಾಗುವುದು ಎಂದಿದ್ದಾರೆ.
ಅಲ್ಲದೇ, ಕ್ಷೀರ ಸಮೃದ್ಧಿ ಬ್ಯಾಂಕ್ ಮೂಲಕ ಸಾಲ ಸೌಲಭ್ಯಕ್ಕೆ ೩೬೦ ಕೋಟಿ ರೂ. ಅನುದಾನ ಮೀಸಲಿಡಲಾಗುವುದು. ಗೋವುಗಳ ದತ್ತು ಸ್ವೀಕಾರಕ್ಕೆ ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತರಲಾಗುವುದು ಎಂದರು.
ಜೋಗದಲ್ಲಿ ತಾರಾ ಹೊಟೇಲ್, ರೋಪ್ ವೇ ನಿರ್ಮಾಣಕ್ಕೆ ೧೧೬ ಕೋಟಿ ರೂ. ಅನುದಾನ
ಬೆಂಗಳೂರು/ಜೋಗ: ವಿಶ್ವವಿಖ್ಯಾತ ಜೋಗ ಜಲಪಾತದ ಬಳಿಯಲ್ಲಿ ತಾರಾ ಹೊಟೇಲ್ ನಿರ್ಮಾಣ ಹಾಗೂ ರೋಪ್ ವೇ ನಿರ್ಮಾಣಕ್ಕಾಗಿ ೧೧೬ ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ.
ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಮಂಡಿಸಿರುವ ಬಜೆಟ್’ನಲ್ಲಿ ಈ ವಿಚಾರವನ್ನು ಘೋಷಿಸಿದ್ದು, ಪ್ರವಾಸಿಗರನ್ನು ಆಕರ್ಷಿಸುವ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ಕ್ರಮದ ಭಾಗವಾಗಿ ತಾರಾ ಹೊಟೇಲ್, ರೋಪ್ ವೇ ನಿರ್ಮಾಣಕ್ಕಾಗಿ ಈ ಅನುದಾನ ಘೋಷಿಸುತ್ತಿದ್ದೇವೆ ಎಂದಿದ್ದಾರೆ.