Site icon TUNGATARANGA

ಶಿವಮೊಗ್ಗ/ದೆಹಲಿ ಪ್ರವಾಸ ಮುಗಿಸಿ ನಾಳೆ ಬರಲಿರುವ ಕಾರ್ಪೋರೇಟರ್‌ಗಳು, ನಗರದಲ್ಲಿ ಭವ್ಯ ಸ್ವಾಗತ …?!

ಶಿವಮೊಗ್ಗ, ಫೆ.೨೬:
ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಯ ಭರ್ಜರಿ ಕೆಲಸಗಳು ನಡೆಯುತ್ತಿರುವ ಹೊತ್ತಿನಲ್ಲಿ ಅಂದರೆ ನೇರವಲ್ಲದ ಡ್ರೈನೇಜ್ ನಿರ್ಮಾಣ, ರಸ್ತೆಗಳ ಕಿರಿದಾಗಿಸುವಿಕೆ, ಸುಖಾಸುಮ್ಮನ್ನೆ ಸ್ಲಾಬ್‌ಗಳನ್ನು ಹಾಕುವುದು ಸೇರಿದಂತೆ ಹತ್ತು ಹಲವು ಪುಕ್ಕಟ್ಟೆ ಕಾಮಗಾರಿಗಳನ್ನು ನಡೆಸುತ್ತಿರುವಾಗಲೇ ನಮ್ಮ ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್, ಆಯುಕ್ತರು ಹಾಗೂ ಬರೋಬ್ಬರಿ ಕಾರ್ಪೋರೇಟರ್‌ಗಳು ದೆಹಲಿಯಲ್ಲಿ ಅಧ್ಯಯನ ಮಾಡಿ ಬರಲು ಹೋಗಿ ನಾಳೆ ಬರುತ್ತಿದ್ದಾರೆ. ಅವರಿಗೆ ಶಿವಮೊಗ್ಗ ನಗರದ ಜನತೆ ಭವ್ಯ ಸ್ವಾಗತ ಕೋರಲು ಮುಂದಾಗಿದೆ.


ಸ್ಮಾರ್ಟ್‌ಸಿಟಿ ೨ನೇ ಹಂತದ ಕಾಮಗಾರಿ ನಡೆಸಬಹುದಾದ ರೀತಿ ರಿವಾಜುಗಳ ಬಗ್ಗೆ ರಾಷ್ಟ್ರೀಯ ಸ್ಮಾರ್ಟ್‌ಸಿಟಿ ಕಾರ್ಯದರ್ಶಿ ಅವರೊಂದಿಗೆ ಸಂವಾದ ನಡೆಸಿ ಶಿವಮೊಗ್ಗದ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿರುವ ಈ ತಂಡ ಉದಯಪುರ, ಜಯಪುರ ಮೊದಲಾದ ಸ್ಥಳಗಳ ಪಾಲಿಕೆಗಳಿಗೆ ಭೇಟಿ ನೀಡಿ ಅಲ್ಲಿನ ಮಾಹಿತಿಗಳನ್ನು ಸಂಗ್ರಹಿಸಿದೆ. ಕಳೆದ ಫೆ.೧೯ರಂದು ಶಿವಮೊಗ್ಗ ಬಿಟ್ಟಿದ್ದ ಈ ಬೃಹತ್ ತಂಡ ನಾಳೆ ಬೆಳಗ್ಗೆ ೧೧ರ ನಂತರ ಬೆಂಗಳೂರು ತಲುಪಲಿದೆ. ರಾತ್ರಿಯ ಹೊತ್ತಿಗೆ ಈ ತಂಡ ಶಿವಮೊಗ್ಗಕ್ಕೆ ಬರಲಿದ್ದು, ಹಲವು ಆಪೇಕ್ಷಗಳ ನಡುವೆ ಈ ತಂಡಕ್ಕೆ ಭವ್ಯ ಸ್ವಾಗತ ಕೋರಲು ಕೆಲವರು ಸಿದ್ದರಾಗಿದ್ದಾರೆ ಎಂದು ಹೇಳಲಾಗಿದೆ.


ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಬಹುತೇಕ ಸದಸ್ಯರು ಈ ಪ್ರವಾಸದಲ್ಲಿ ಪಾಲ್ಗೊಂಡಿದ್ದಾರೆ. ಇವರು ದೆಹಲಿ ತಲುಪುವ ದಿನ ಶಿವಮೊಗ್ಗ ನಗರದಲ್ಲಿ ಹರ್ಷನ ಕೊಲೆಯಾಗಿದೆ. ಉಪಮೇಯರ್ ಶಂಕರ್‌ಗನ್ನಿ ವಾರ್ಡ್‌ನಲ್ಲೇ ಈ ಗಲಾಟೆಯಾಗಿದ್ದು, ಮೇಯರ್ ಸುನೀತಾ ಅಣ್ಣಪ್ಪ ಪ್ರತಿನಿಧಿಸುವ ಹಾಜಾದ್ ನಗರದಲ್ಲಿ ಬಹಳಷ್ಟು ಗಲಾಟೆಯಾಗಿದೆ. ವಾಪಾಸ್ ಬರುವ ಪ್ರಯತ್ನ ಮಾಡಿದರಾದರೂ ಸಹ ಹಿರಿಯ ಜನಪ್ರತಿನಿಧಿಗಳ ಸಲಹೆಯಂತೆ ಪ್ರವಾಸ ಮುಗಿಸಿ ಬರುತ್ತಿದ್ದಾರೆ.


ಧನಾತ್ಮಕವಾಗಿ ಚಿಂತಿಸಬೇಕೆಂಬುದನ್ನು ಒಪ್ಪಿಕೊಳ್ಳೋಣ್ಣ. ಈ ಕಾರ್ಪೋರೇಟರ್‌ಗಳ ಅವಧಿ ಮುಗಿಯುತ್ತಿರುವ ಹೊತ್ತಿನಲ್ಲಿ ಈ ಅಧ್ಯಯನ ಪ್ರವಾಸದಿಂದ ಅದೇನು ಲಾಭವಾಗುತ್ತೋ ನೋಡಲು ಕಾಯಬೇಕಿದೆ. ಹದಗೆಡಿಸಿದ ಸ್ಮಾರ್ಟ್‌ಸಿಟಿಯ ಮೊದಲ ಹಂತದ ಕಾಮಗಾರಿ ನೋಡಿ ಕ್ಯಾಕರಿಸಿ ಉಗಿಯುವ ಹೊತ್ತಿನಲ್ಲಿ ಮಸ್ತ್ ಮಸ್ತ್ ಅಧ್ಯಯನ ಪ್ರವಾಸ ಯಾವ ಕಟ್ಟೆ ಕಟ್ಟತ್ತದೆ ನೋಡೋಣ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಗಲಭೆ, ದೊಂಬಿ, ಕೋಮು ದಳ್ಳುರಿಯಲ್ಲಿ ತತ್ತರಿಸಿರುವ ಶಿವಮೊಗ್ಗದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಯ ಅವಾಂತರಗಳು ಹೆಚ್ಚಾಗಿದ್ದು, ಅಧ್ಯಯನದಿಂದ ಹೊಸ ಲವಲೇಶ ಹೊತ್ತುಕೊಂಡು ಬರುತ್ತಿರುವ ಈ ಕಾರ್ಪೋರೇಟರ್‌ಗಳು, ಆಯುಕ್ತರು ಅದೇನು ಬದಲಾವಣೆ ಮಾಡುತ್ತಾರೋ ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಶಿವಮೊಗ್ಗಕ್ಕೆ ಬರಲು ಹಲವರು ಆತ್ಮೀಯ ಸ್ವಾಗತ ಕೋರಿದ್ದಾರೆ. ಅವರ ಎಲ್ಲಾ ವಿವರಗಳು ಸೋಮವಾರದ ಹೊತ್ತಿಗೆ ಗೊತ್ತಾಗಲಿದೆ.

Exit mobile version