Site icon TUNGATARANGA

ರೈತರೇ ಗಮನಿಸಿ…, ಅಡಿಕೆ ಬೆಳೆಯಲ್ಲಿನ ನುಸಿ ಬಾಧೆ ನಿರ್ವಹಣೆ

ಶಿವಮೊಗ್ಗ, ಫೆ. 23:

ಡಿಸೆಂಬರ್ ನಿಂದ ಏಪ್ರಿಲ್ ತಿಂಗಳವರೆಗೆ ತಾಪಮಾನ ಹೆಚ್ಚಾಗಿರುವುದರಿಂದ ನುಸಿಗಳ ವಂಶಾಭಿವೃದ್ಧಿ ಯಥೇಚ್ಚವಾಗಿದ್ದು ಅಡಿಕೆಯಲ್ಲಿ ಈ ಸಮಯದಲ್ಲಿ ನುಸಿ ಬಾಧೆ ಹೆಚ್ಚಾಗಿ ಕಂಡು ಬರುತ್ತದೆ. ನೀರು ಮತ್ತು ನೆರಳು ಸಮರ್ಪಕವಾಗಿ ದೊರೆಯದ ತೋಟಗಳಲ್ಲಿ ಇವುಗಳು ಹೆಚ್ಚಾಗಿ ಕಂಡು ಬರುತ್ತದೆ.
ನುಸಿ ಮೊಟ್ಟೆ ಹಾಗೂ ಅದರಿಂದ ಹೊರಬಂದ ಎಲ್ಲಾ ಹಂತದ ಮರಿಗಳು ಎಲೆಗಳ ಕೆಳಭಾಗದಲ್ಲೇ ಜೀವಿಸುತ್ತವೆ. ನುಸಿ ಬಾಧಿತ ಎಲೆಯ ಕೆಳಭಾಗವನ್ನು ಬೆರಳಿನಿಂದ ಒತ್ತಿ ಎಳೆದಾಗ ಬೆರಳುಗಳು ರಕ್ತದಂತೆ ಕೆಂಪಾಗಿ ಕಂಡು ಬರುತ್ತದೆ. ಇವುಗಳು ಸೂಜಿಯಂತೆ ಚೂಪಾಗಿರುವ ನಳಿಕೆಯಿಂದ ರಸವನ್ನು ಹೀರುವುದರಿಂದ ರಸ ಹೀರಿದ ಭಾಗದಲ್ಲಿ ಹಳದಿ ಚುಕ್ಕೆಗಳು ಮೂಡಿ ನಂತರ ಎಲೆ ಹಳದಿ ಬಣ್ಣಕ್ಕೆ ತಿರುಗುತ್ತದೆ.


ಇವುಗಳ ಬಾಧೆ ಉಲ್ಬಣಗೊಂಡಾಗ ಗರಿಗಳು ಸೀಳುವುದಲ್ಲದೆ ಒಣಗಿ ಸಾಯುತ್ತವೆ. ರೈತರು ಈ ಕೆಳಗಿನಂತೆ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕು. ಮಾಹಿತಿಯನ್ನು ಡಾ. ನಾಗರಾಜಪ್ಪ ಅಡಿವಪ್ಪರ್, ಮುಖ್ಯಸ್ಥರು, ಅಡಿಕೆ ಸಂಶೋಧನಾ ಕೇಂದ್ರ, ನವಿಲೆ, ಶಿವಮೊಗ್ಗ ಇವರು ತಿಳಿಸಿರುತ್ತಾರೆ.
ನಿರ್ವಾಹಣಾ ಕ್ರಮಗಳು:
ಎಳೆಯ ವಯಸ್ಸಿನ ಅಡಿಕೆ ತೋಟಗಳಲ್ಲಿ ಸಮರ್ಪಕವಾಗಿ ನೆರಳನ್ನು ಒದಗಿಸುವ ಬಾಳೆಯನ್ನು ಅಂತರ ಬೆಳೆಯಾಗಿ ಬೆಳೆಯಬೇಕು. ಅಡಿಕೆ ಸೋಗೆ/ತೆಂಗಿನ ಸೋಗೆಯಿಂದ ಎಳೆಯ ಗಿಡಗಳಿಗೆ ನೆರಳನ್ನು ಒದಗಿಸಬೇಕು. ತೀವ್ರ ಹಾನಿಗೊಳಗಾದ ಎಲೆಗಳನ್ನು ತೆಗೆದು ಹಾಕಬೇಕು. ನುಸಿಯ ಬಾಧೆ ಕಂಡು ಬಂದಾಗ ಇವುಗಳ ನಿರ್ವಹಣೆಗಾಗಿ 2.5 ಮಿ.ಲೀ ಡೈಕೋಫಾಲ್ 18.5 ಇ.ಸಿ ಅಥವಾ 2.0 ಮಿ.ಲೀ ಮಿಟ್ 40 ಇ.ಸಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಎಲೆಗಳ ಕೆಳಭಾಗ ಸಂಪೂರ್ಣ ತೊಯ್ಯುವಂತೆ ಸಿಂಪಡಿಸಬೇಕು. ಬಾಧೆ ಪುನಃ ಕಂಡು ಬಂದಲ್ಲಿ ಎರಡು ವಾರಗಳ ನಂತರ ಇದೇ ಸಿಂಪರಣೆಯನ್ನು ಮತ್ತೆ ಕೈಗೊಳ್ಳಬೇಕು ಎಂದು ನವಿಲೆಯ ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ. ನಾಗರಾಜಪ್ಪ ಅಡಿವಪ್ಪರ್ ಇವರು ತಿಳಿಸಿದ್ದಾರೆ.

Exit mobile version