ಶಾಂತ ಸ್ಥಿತಿಯತ್ತ ಶಿವಮೊಗ್ಗ
ಶಿವಮೊಗ್ಗ, ಫೆ.೨೩:
ಕಳೆದ ನಾಲ್ಕು ದಿನಗಳಿಂದ ಉದ್ವಿಗ್ನ ಗೊಂಡಿದ್ದ ಶಿವಮೊಗ್ಗ ಶಾಂತವಾಗಿದ್ದು, ನಿಧಾನವಾಗಿ ಸಹಜಸ್ಥಿತಿಯತ್ತ ಮರಳುತ್ತಿದೆ.
ಯುವಕ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಕಳೆದ ನಾಲ್ಕು ದಿನಗಳಿಂದಲೂ ಗಲಭೆ, ಗಲಾಟೆ, ವಾಹನಗಳಿಗೆ ಬೆಂಕಿ ಹಚ್ಚುವುದು, ಆಸ್ತಿಪಾಸ್ತಿ ನಷ್ಟ, ರಾಜಕೀಯ ಹೇಳಿಕೆಗಳಿಂದ ಹೈರಾಣ ಗೊಂಡಿದ್ದ ನಗರದ ಪರಿಸ್ಥಿತಿ ಈಗ ಹತೋಟಿಗೆ ಬಂದಿದೆ.
7 ಡ್ರೋಣ್ ಕ್ಯಾಮೆರಾ ಬಳಕೆ
ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ದುಷ್ಕರ್ಮಿಗಳ ಚಲನವಲನ ಗಮನಿಸಲು ೭ ಡ್ರೋಣ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಇದಕ್ಕಾಗಿ ೪ ತಂಡಗಳನ್ನು ಕೇರಳ, ಮಂಡ್ಯ, ಉತ್ತರ ಕನ್ನಡ, ಕರಾವಳಿ ರಕ್ಷಣಾ ಪಡೆಯ ೨೦ಕ್ಕೂ ಹೆಚ್ಚು ಪೊಲೀಸರ ತಂಡ ಆಗಮಿಸಿದ್ದು, ಶಿವಮೊಗ್ಗ ನಗರವನ್ನು ಗ್ರೌಂಡ್ ಕಣ್ಗಾವಲಲ್ಲಿ ಪರಿಶೀಲನೆ ಮಾಡಲಿದೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಮಾಧ್ಯಮದವರ ಜೊತೆ ಮಾತನಾಡಿ, ಪರಿಸ್ಥಿತಿ ಹತೋಟಿಯಲ್ಲಿದೆ. ಆದರೂ ಸಹ ಅಹಿತಕರ ಘಟನೆಗಳ ತಡೆಗೆ ಮತ್ತು ಪರಿಶೀಲಿಸಲು ರಾಜ್ಯದ ವಿವಿಧ ಕಡೆಗಳಿಂದ ೭ ಡ್ರೋಣ್ ಕ್ಯಾಮೆರಾಗಳನ್ನು ತರಿಸಲಾಗಿದೆ. ವಿಶೇಷ ಕಟ್ಟೆಚ್ಚರ ವಹಿಸಲಾಗಿದೆ. ಡ್ರೋಣ್ ಕ್ಯಾಮೆರಾಗಳನ್ನು ಎಲ್ಲೆಲ್ಲಿ ಬಳಸಬೇಕು ಎನ್ನುವುದನ್ನು ನಿರ್ಧರಿಸಲಾಗುವುದು. ಒಟ್ಟಾರೆ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಕಾಣದ ಕೈಗಳ ಕೈವಾಡ, ಸೂಕ್ತ ತನಿಖೆ: ನಳಿನ್ ಕುಮಾರ್ ಕಟೀಲ್
ಶಿವಮೊಗ್ಗ, ಫೆ.೨೩:
ಹರ್ಷ ಹತ್ಯೆ ಹಿಂದೆ ಕಾಣದ ಕೈಗಳ ಕೈವಾಡವಿದ್ದು, ಸೂಕ್ತ ತನಿಖೆ ನಡೆಸುವ ಮೂಲಕ ನಮ್ಮ ಸರ್ಕಾರ ಬಹಿರಂಗ ಪಡಿಸ ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಇಂದು ಮೃತ ಹರ್ಷನ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಈಗಾಗಲೇ ೮ ಜನರನ್ನು ಬಂಧಿಸಲಾ ಗಿದೆ. ಘಟನೆ ನಡೆದ ನಂತರ ಆರೋಪಿಗ ಳನ್ನು ಶೀಘ್ರವಾಗಿ ಬಂಧಿಸುವಲ್ಲಿ ಶಿವಮೊಗ್ಗದ ಪೊಲೀಸರು ಯಶಸ್ವಿಯಾಗಿದ್ದಾರೆ. ಅವರಿಗೆ ಅಭಿನಂದನೆಗಳು. ಪರಿಸ್ಥಿತಿ ಈಗ ಹತೋಟಿ ಯಲ್ಲಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಹಂತಕರು ಯಾವುದೇ ರೀತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ತನಿಖೆ ನಡೆಯುತ್ತಿದೆ. ಬಂಧಿತರ ವಿಚಾರಣೆ ಯೂ ಆಗುತ್ತಿದೆ. ಮುಂದೆ ಇಂತಹ ಘಟನೆ ಗಳು ಮರುಕಳಿಸದಂತೆ ನಮ್ಮ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಸರ್ಕಾರ ಇದಕ್ಕಾಗಿ ಈಗಾಗಲೇ ಎಲ್ಲ ರೀತಿಯ ಕ್ರಮಗಳನ್ನು ಅನುಸರಿಸುತ್ತಿದೆ ಎಂದರು.
ಸೂಕ್ತ ತನಿಖೆಗೆ ಗೃಹ ಸಚಿವರ ಸೂಚನೆ
ಶಿವಮೊಗ್ಗದಲ್ಲಿ ನಡೆದ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹಸಚಿವ ಆರಗ ಜ್ಞಾನೇಂದ್ರ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪ್ರಕರಣಕ್ಕೆ ಕುರಿತು ಬಂಧಿಸಿರುವ ೮ ಜನ ಆರೋಪಿಗಳ ಪೈಕಿ ಕೆಲವರ ಮೇಲೆ ಈ ಹಿಂದೆ ದೊಡ್ಡಪೇಟೆ, ಕೋಟೆ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಕ್ರಿಮಿನಲ್ ಹಿನ್ನೆಲೆ ಉಳ್ಳ ಈ ಆರೋಪಿಗಳ ವಿವರಗಳು ಹಾಗೂ ಆ ಠಾಣೆಗಳಲ್ಲಿ ಕಳೆದ ೫ ವರ್ಷಗಳ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತೆಗೆದುಕೊಂಡ ಕ್ರಮಗಳು ಏನು ಎಂದು ಮಾಹಿತಿ ಕೇಳಿದ್ದಾರೆ.
ಶಿವಮೊಗ್ಗ ನಗರದಲ್ಲಿ ಸಮಾಜ ಘಾತುಕ ಶಕ್ತಿಗಳ ಬೆಳವಣಿಗೆಯಲ್ಲಿ ಪೊಲೀಸರ ಪಾತ್ರದ ಬಗ್ಗೆಯೂ ಅನುಮಾನಗಳಿವೆ. ಈ ಬಗ್ಗೆ ಸಾರ್ವಜನಿಕರಿಂದ ದೂರು ಸಹ ಬಂದಿದೆ. ಈ ಬಗ್ಗೆಯೂ ತನಿಖೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಸುಮ್ಮನೆ ಬಿಡುವುದಿಲ್ಲ: ಬಿ.ವೈ.ವಿಜಯೇಂದ್ರ
ಶಿವಮೊಗ್ಗ, ಫೆ.೨೩:
ಯಾವುದೇ ಕಾರಣಕ್ಕೂ ಕೊಲೆಗಡುಕರನ್ನು ಸುಮ್ಮನೆ ಬಿಡೋಲ್ಲ. ಸರ್ಕಾರ ಈಗಾಗಲೇ ಎಲ್ಲ ರೀತಿಯ ಕಠಿಣ ಕ್ರಮ ಗಳನ್ನು ಕೈಗೊಂಡಿದ್ದು, ಇನ್ನು ಮುಂದೆ ರಾಜ್ಯದಲ್ಲಿ ಇಂತಹ ಘಟನೆ ಮರುಕಳಿ ಸದಂತೆ ಕಟ್ಟೆಚ್ಚರ ವಹಿಸಲಾಗುವುದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ಅವರು ಇಂದು ಮೃತ ಹರ್ಷನ ಕುಟುಂಬಕ್ಕೆ ಸಾಂತ್ವನ ಹೇಳಿ ನಂತರ ಮಾಧ್ಯಮ ಗಳೊಂದಿಗೆ ಮಾತನಾಡಿದರು. ಈಗಾಗಲೇ ಮುಖ್ಯಮಂತ್ರಿಗಳು ಕೂಡ ಈ ಬಗ್ಗೆ ಭರವಸೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಹರ್ಷನ ಕುಟುಂಬ ದುಃಖದಲ್ಲಿರುವಾಗ ಕಾಂಗ್ರೆಸ್ ಮುಖಂಡರ ನಡವಳಿಕೆ ಖಂಡನೀಯವಾಗಿದೆ. ಶಾಂತಿ ಸುವ್ಯವಸ್ಥೆಯನ್ನ ಕದಡುವ ಸಂಚನ್ನು ಕಾಂಗ್ರೆಸ್ ಮಾಡುತ್ತಿದೆ. ರಾಷ್ಟ್ರ ವಿರೋಧಿ ಶಕ್ತಿಗಳ ವಿರುದ್ಧ ಕೈಜೋಡಿಸುವ ಕಾಂಗ್ರೆಸ್ ನಡವಳಿಕೆ ತಲೆತಗ್ಗಿಸುವಂತಹದ್ದು ಎಂದರು.
ಮೆರವಣಿಗೆಯ ಸಂದರ್ಭದಲ್ಲಿ ಒಂದು ಗುಂಪು ಕಟ್ಟಡದ ಮೇಲಿನಿಂದ ಕಲ್ಲು ತೂರುವು ದಲ್ಲದೇ ಲಾಂಗು ಮಚ್ಚು ಹಿಡಿದು ಬೆದರಿಕೆ ಹಾಕಿದ್ದಕ್ಕೆ ಮೆರವಣಿಗೆಯಲ್ಲಿ ಇದ್ದ ಯುವಕರು ಪ್ರತಿಕ್ರಿಯಿಸಿದ್ದಾರೆ. ಹರ್ಷನ ಬರ್ಭರ ಹತ್ಯೆ ವ್ಯರ್ಥ ವಾಗಲು ಬಿಡುವುದಿಲ್ಲ. ಈ ತರಹದ ಗೂಂಡಾವರ್ತನೆ ಸಹಿಸುವುದಿಲ್ಲ. ಸರ್ಕಾರ ಕಣ್ಣುಮುಚ್ಚಿ ಕುಳಿತಿಲ್ಲ. ಕಣ್ಣುಮುಚ್ಚಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.
ಆರೋಪಿಗಳ ವಿರುದ್ಧ ಸೂಕ್ತ ತನಿಖೆಗೆ ಮನವಿ
ಸಾಗರ, ಫೆ.೨೩:
ಶಿವಮೊಗ್ಗದ ಸೀಗೆಹಟ್ಟಿ ನಿವಾಸಿ ಹರ್ಷ ಜಿಂಗಾಡೆ ಅವರನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಬುಧವಾರ ಭಾಹುಸಾರ ಕ್ಷತ್ರೀಯ ಸಮಾಜದ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸ ಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತುಳಜಾ ಭವಾನಿ ಸೇವಾ ಸಮಿತಿ ಅಧ್ಯಕ್ಷ ಚಂದ್ರಕಾಂತ ಜಿಂಗಾಡೆ, ಭಜರಂಗದಳದ ಸಕ್ರಿಯ ಕಾರ್ಯಕರ್ತ ಹಾಗೂ ಹಿಂದೂ ಪರ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ ದೇಶಭಕ್ತ ಯುವಕ ಹರ್ಷ ಜಿಂಗಾಡೆ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವುದನ್ನು ಕ್ಷತ್ರೀಯ ಸಮಾಜ ತೀವೃವಾಗಿ ಖಂಡಿಸುತ್ತದೆ. ಹರ್ಷ ಜಿಂಗಾಡೆ ಕ್ಷತ್ರೀಯ ಸಮಾಜದ ಸಕ್ರಿಯ ಕಾರ್ಯಕರ್ತನಾಗಿದ್ದು, ಜನಾಂಗದ ಶ್ರೇಯೋ ಭಿವೃದ್ದಿಗೆ ತನ್ನದೆ ಕೊಡುಗೆ ನೀಡಿದ್ದರು. ರಾಜ್ಯದಲ್ಲಿ ಹಿಂದೂ ಬಾಂಧವರಿಗೆ ರಕ್ಷಣೆ ಇಲ್ಲದಂತೆ ಆಗಿದೆ. ಸರ್ಕಾರ ಹರ್ಷ ಜಿಂಗಾಡೆ ಅವರನ್ನು ಕೊಲೆ ಮಾಡಿರುವ ಕೊಲೆಪಾತಕರಿಗೆ ಕಠಿಣ ಶಿಕ್ಷೆ ವಿಧಿಸಬೇಬೇಕು ಎಂದು ಒತ್ತಾಯಿಸಿದರು.
ಈಶ್ವರಪ್ಪ ವಿರುದ್ಧ ಕೇಸು ದಾಖಲಿಸಲು ದೂರು
ಸಾಗರ, ಫೆ.೨೩:
ರಾಷ್ಟ್ರಧ್ವಜಕ್ಕೆ ಅವಮಾನಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮೇಲೆ ಕೇಸು ದಾಖಲಿಸುವಂತೆ ಒತ್ತಾಯಿಸಿ ಮಂಗಳವಾರ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು ಪೇಟೆ ಠಾಣೆಗೆ ದೂರು ನೀಡಿದ್ದಾರೆ.
ರಾಜ್ಯದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ, ರಾಷ್ಟ್ರಧ್ವಜ ಕುರಿತು ಅವಹೇಳನಾಕಾರಿ ರೀತಿಯಲ್ಲಿ ಮಾತನಾಡಿದ್ದಾರೆ. ದೆಹಲಿಯ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜವನ್ನು ತೆಗೆದು ಕೇಸರಿ ಧ್ವಜವನ್ನು ಹಾರಿಸುತ್ತೇವೆಂದು ಹೇಳಿದ್ದಾರೆ. ಇದು ಸಂವಿಧಾನ ಬಾಹಿರ ಹೇಳಿಕೆಯಾಗಿದ್ದು, ತಕ್ಷಣ ರಾಜ್ಯ ಸರ್ಕಾರ ಅವರನ್ನು ಮಂತ್ರಿ ಪದವಿಯಿಂದ ವಜಾಗೊಳಿಸಬೇಕು. ರಾಷ್ಟ್ರಧ್ವಜಕ್ಕೆ ಅವಮಾನಿಸಿರುವ ಈಶ್ವರಪ್ಪ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ವೈ.ಎನ್.ಹುಬ್ಬಳ್ಳಿ, ಧರ್ಮಣ್ಣ, ಮಂಜುನಾಥ್, ಕುಮಾರ್, ಸುರೇಶ್, ಸಚಿನ್, ನಾಗರಾಜ್, ಶೇಖರ್ ಇನ್ನಿತರರು ಹಾಜರಿದ್ದರು.
ಫೆ.೨೭: ಹೊನಲು ಬೆಳಕಿನ ಥ್ರೋಬಾಲ್ ಯಡಿಯೂರಪ್ಪ ಕಪ್-೨೦೨೨
ಶಿವಮೊಗ್ಗ, ಫೆ.೨೩:
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ೭೮ನೇ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಥ್ರೋಬಾಲ್ ಪಂದ್ಯಾವಳಿ (ಯಡಿಯೂರಪ್ಪ ಕಪ್-೨೦೨೨) ಯನ್ನು ಫೆ.೨೭ರ ಭಾನುವಾರ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸ ಲಾಗಿದೆ.
ಪಂದ್ಯಾವಳಿಯಲ್ಲಿ ಪುರುಷರು ಹಾಗೂ ಮಹಿಳೆ ಯರು ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರು ಭಾಗವಹಿಸಬಹುದು. ವಿಜೇತ ತಂಡಗಳಿಗೆ ಆಕರ್ಷಕ ಬಹುಮಾನ ಮತ್ತು ಟ್ರೋಫಿ ಹಾಗೂ ಪಾರಿತೋಷಕ ಗಳನ್ನು ನೀಡಲಾಗುವುದು.
ಆಸಕ್ತ ತಂಡಗಳು ಫೆ.೨೫ರೊಳಗೆ ತಮ್ಮ ತಂಡದ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿ ಗಾಗಿ ೯೯೪೫೪೭೪೧೦೪, ೭೪೧೧೨೨೫೦೯೫, ೯೯೮೦೨೭೭ ೫೭೬, ೯೯೮೬೧೦೨೩೫೦ಗೆ ಸಂಪರ್ಕಿಸಲು ಕೋರಿದ್ದಾರೆ.