Site icon TUNGATARANGA

ಶಿವಮೊಗ್ಗಕ್ಕಿದು ಬೇಕಿತ್ತಾ..?.. ಇದು ನನ್ಮಾತು, ನಿಮ್ಮ ಅಭಿಪ್ರಾಯವೂ ಸೇರಲಿ, ಶಾಂತಿ ನೆಲೆಸಲಿ

ತುತ್ತಿಗೆ ಕುತ್ತು, ಮಕ್ಕಳ ಬದುಕಿಗೆ ಆಪತ್ತು ತರುವುದು ಬೇಕಿತ್ತಾ: ಗಜೇಂದ್ರ ಸ್ವಾಮಿ ಮನದಾಳದ ಇಂಗಿತ

ಕಳೆದ ೨೦೨೦ ಹಾಗೂ ೨೦೨೧ರ ಸಾಲಿನಲ್ಲಿ ಕೊರೊನಾ ಹೆಸರಿನಲ್ಲೇ ಬದುಕು ಕಳೆದುಕೊಂಡ ಇಡೀ ವಿಶ್ವದ ಜನರ ಜೊತೆ ಶಿವಮೊಗ್ಗ ಜಿಲ್ಲೆಯ ಜನರು ಸಹ ಅದರಲ್ಲೂ ಕಲಿಯಬೇಕಿದ್ದ ಮಕ್ಕಳು ನೊಂದಿದ್ದರು. ಹೊಸ ಬದುಕಿಗೆ ಕಾಲಿಟ್ಟ ೨೦೨೨ರ ದಿನಗಳು ಸಂತೋಷ ತಂದವು ಎನ್ನುವಷ್ಟರಲ್ಲೇ ಶಿವಮೊಗ್ಗದಲ್ಲಿ ಆರಂಭಗೊಂಡ ಹಿಜಾಬ್ ಗಲಭೆ ಮತ್ತೆ ಮಕ್ಕಳ ಬದುಕಿಗೆ ಕೊಕ್ಕೆ ಇಟ್ಟಿತ್ತು. ಈ ಕೊಕ್ಕೆ ಜನರ ಜೀವನಕ್ಕೂ ಸಹ, ಅಂದಿನ ದುಡಿಮೆ ನಂಬಿ ಬದುಕುತ್ತಿದ್ದವರಿಗೆ ಮರಣಶಾಸನ ಮತ್ತೊಮ್ಮೆ ಬರೆದಂತಾಯಿತು. ನ್ಯಾಯಾಲಯದ ಆದೇಶ, ಅದಕ್ಕೆ ನೀಡಬೇಕಾದ ಗೌರವ, ನಮ್ಮ ಸಂವಿಧಾನ, ದೇಶಪ್ರೇಮ ಇವುಗಳ ನಡುವೆ ಸಮವಸ್ತ್ರ ವಿಚಾರ ಒಂದು ಹಾದಿಗೆ ಬರುತ್ತಿದೆ ಎನ್ನುವಷ್ಟರಲ್ಲಿ ಒಂದು ಕೊಲೆ ಇಡೀ ಶಿವಮೊಗ್ಗ ನಗರವನ್ನು, ದೇಶ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದು ನಮ್ಮ ನಾಚಿಕೆಗೇಡಿನ ವಿಚಾರವೇ ಹೌದು.


ಮಲೆನಾಡಿನ ಮಡಿಲಲ್ಲಿ ಸದಾ ಜಿಲ್ಲೆಗೆ, ರಾಜ್ಯಕ್ಕೆ, ದೇಶಕ್ಕೆ, ವಿಶ್ವಕ್ಕೆ ಸ್ಫೂರ್ತಿಧಾಯಕ, ಹೊಸತನದ ಶಾಂತಿ ಸಂದೇಶ ನೀಡಿದ ಶಿವಮೊಗ್ಗ ಜಿಲ್ಲೆ ಈಗ ಮತ್ತೆ ಮತೀಯ ಗಲಭೆ, ಕೋಮು ಹಿಂಸಾಚಾರ, ಸಾಮಾಜಿಕ ದಳ್ಳುರಿಗೆ ತಲುಪಿದ್ದು, ದುರಂತವೇ ಹೌದು.
ಶಿವಮೊಗ್ಗ ನಗರದಲ್ಲಿ ಮೊನ್ನೆ ನಡೆದ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಯಾವ ಕಾರಣಕ್ಕೆ ಆಗಿದೆ. ಕೊಂದ ಕಡುಪಾಪಿಗಳು ಯಾರು.? ಅದರ ಹಿನ್ನೆಲೆಯ ಏನು? ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸುವ ತನಿಖೆ ನಡೆಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮುಂದಾಗುವ ಮುನ್ನವೇ ಹರ್ಷನ ಸಾವಿನ ಹಿಂದಣ, ಮುಂದಣ ಚಿತ್ರಗಳಿಗೆ ಪೂರಕ ಹಾಗೂ ಪ್ರೇರಕ ಮತ್ತು ಪ್ರಚೋದಕ ಅಂಶಗಳು ಹೊರ ಬಂದದ್ದು ದುರಂತವೇ ಹೌದು.


ಐವರು ಮುಖ್ಯಮಂತ್ರಿಗಳನ್ನು, ಸಮಾಜವಾದಿ ನೆಲೆಯನ್ನು ನೀಡಿರುವ ಶಿವಮೊಗ್ಗ ಜಿಲ್ಲೆ ಕುವೆಂಪು, ಡಾ.ಜಿ.ಎಸ್.ಶಿವರುದ್ರಪ್ಪರಂತಹ ಇಬ್ಬರು ರಾಷ್ಟ್ರಕವಿಗಳನ್ನ ಅಪಾರ ಸಾಹಿತ್ಯ ಪ್ರಪಂಚವನ್ನು ಬಿಂಬಿಸಿದ ಭೂಮಿಯಲ್ಲಿ ಈ ಮತೀಯ ಗಲಭೆಗಳು ನೆನಪಾದಾಗೊಮ್ಮೆ ಎಂಬಂತೆ ಪದೇ ಪದೇ ಪೀಡಿಸುತ್ತಿರುವುದರ ಹಿಂದೆ ನಮ್ಮನ್ನಾಳುವ ಶಕ್ತಿಗಳು ಕಾಣದ ಕೈಗಳಲ್ಲಿ ಸೃಷ್ಠಿಸುವ ಭ್ರಷ್ಟ ದರೋಡೆ ಮನಸ್ಸಿನ ಸಂಘಟನೆಗಳು ಪೂರಕ ಹಾಗೂ ಪ್ರೇರಕವಾಗಿ ನಿಂತಿರುವುದು ರಕ್ಷಣಾ ಇಲಾಖೆಯ ಕಾರ್ಯಚಟುವಟಿಕೆಗಳಿಗೆ ಹಿಡಿತದ ಚೌಕಟ್ಟು ರೂಪಿಸುವುದು ದುರಂತವೇ ಹೌದು.


ಬಡ ಹಾಗೂ ಅಂದಿನ ತುತ್ತು ದುಡಿದು ತಿಂದು ಉಣ್ಣುವ ತಂದೆ-ತಾಯಿಯರ ಬಗ್ಗೆ ಯೋಚಿಸಿ. ಬಡತನಗಳ ಬಗ್ಗೆ ಸ್ಲೇಟ್ ಕೊಳ್ಳಲಾಗದೇ ಅಕ್ಷರ ಕಲೆಯದ ಮಕ್ಕಳ ಮುಗ್ದತೆಯ ಬಗ್ಗೆ ಅದರ ಮುಂದಿನ ಭವಿಷ್ಯದ ಬಗ್ಗೆ ಯೋಚಿಸಿ ಸ್ವಾರ್ಥ ಸಾಧನೆಗೋಸ್ಕರ ತಮ್ಮ ತಮ್ಮ ಬೆಳೆಕಾಳುಗಳನ್ನು ಬೇಯಿಸಿಕೊಳ್ಳಲು ಎರಡೂ ಕಡೆಗಳಲ್ಲಿ ನಾಯಿಗಳಂತೆ ಕಿತ್ತಾಡುವ, ಕಿರುಚಾಡುವ ಹೊಡೆದಾಡುವ, ಬಡಿದಾಡುವ ಮನಸ್ಸುಗಳನ್ನು ಹೊಂದಿರುವವರು ಮೌನವಾಗಿದ್ದು ಬಿಡಿ ಸಾಕು. ತಪ್ಪು ಮಾಡಿದವನು ಯಾರೇ ಆದರೂ ಅವನಿಗೆ ಕಾನೂನಾತ್ಮಕ ಶಿಕ್ಷೆ ದೊರೆತೆ ತೀರುತ್ತದೆ. ಅದು ಆಗದಿದ್ದರೆ ನಾವು ನಂಬಿರುವ, ನಮ್ಮನ್ನು ನಮ್ಮತನದಲ್ಲಿ ಉಳಿಸಿರುವ ಭಗವಂತನೆ ಕೊಡುವ ಶಿಕ್ಷೆಯನ್ನು ಕೊಡುತ್ತಾನೆ.
ಇಷ್ಟೊಂದು ಬೇಸರ, ದುಃಖ, ಆತಂಕದ ಪದಗಳ ಬಳಕೆ ಹಿಂದೆ ಸಾವು ಕಂಡವನ ನೋವೂ ಇದೆ. ಅದರ ಹಿನ್ನೆಲೆಯಲ್ಲಿ ಬದುಕು ಕಳೆದುಕೊಂಡವರ, ದುರ್ಬಲರಾದವರ, ಕಲಿಯಲಾಗದ ಮಕ್ಕಳ ಅಳಲಿನ ಆಕ್ರಂದನವೂ ಆಡಗಿದೆ.

ಎಸ್.ಕೆ.ಗಜೇಂದ್ರಸ್ವಾಮಿ, ಸಂಪಾದಕರು, ತುಂಗಾತರಂಗ

Exit mobile version