Site icon TUNGATARANGA

ಪ್ರೇಮಿಗಳ ದಿನದಂದು ಮಲ್ಲಿಗೆ ಅರಳಿದಾಗ ….., ದಿವ್ಯಾಶ್ರೀ ಅವರ ಬರಹ ಓದಿ

ಪ್ರೀತಿ ರಸಪಾಕ !….

“ಪ್ರೀತಿ ಎಂದರೆ, ಎರಡು ಮನಸುಗಳ ಮಿಲನವಷ್ಟೇ ಅಲ್ಲ, ವ್ಯಕ್ತಿತ್ವಗಳ ಅರ್ಥೈಸುವಿಕೆ. ಪ್ರೀತಿ ವಸ್ತುನಿಷ್ಠ ವಲ್ಲ, ಭಾವನಿಷ್ಠ. ದೇಹಗಳ ಆಕರ್ಷಣೆಯಲ್ಲ, ಹೃದಯಗಳ ಆಕರ್ಷಣೆ. ಅದು ಸುಲಭವಾಗಿ ದಕ್ಕುವಂತದ್ದಲ್ಲ, ಒಂದು ಮಹಾ ತಪಸ್ಸು” ಎಂದು ಸಾಹಿತ್ಯದ ಅಧ್ಯಾಪಕರು ತರಗತಿಯಲ್ಲಿ ಹೇಳುತ್ತಲೇ ಇರುತ್ತಾರೆ..

ಆದರೆ ಇಂದಿನ ಪೀಳಿಗೆ ಅದನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗಿ, ಕೊನೆಗೆ ಪ್ರೀತಿಯ ಅರ್ಥವನ್ನೇ ಮರೆತು.. ಕಂಡ ಆಕರ್ಷಣೆಗಳಿಗೆಲ್ಲ (ನಿಮ್ಮ ಭಾಷೆಯಲ್ಲಿ ಕ್ರಶ್) “ಪ್ರೀತಿ” ಎಂಬ ಹೆಸರನಿಟ್ಟಿದೆ..
ತಪಸ್ಸಿನಲ್ಲಿ ಹೇಗೆ ಶ್ರದ್ಧೆ, ತಾಳ್ಮೆ, ನಂಬಿಕೆಗಳು ಬಲವಾಗಿರುತ್ತವೆಯೋ, ಹಾಗೆಯೇ ಪ್ರೀತಿಯಲ್ಲೂ ಈ ಅಂಶಗಳಿರಲೇಬೇಕು. ಇವು ಗೈರುಹಾಜರಾದಲ್ಲಿ, ನೀವು ಪ್ರೀತಿಯ ಪರೀಕ್ಷೆಗೆ ಅನರ್ಹರು ಎಂದೇ ಹೇಳಬಯಸುತ್ತೇನೆ.
ವ್ಯಕ್ತಿ ವಿಕಾಸವಾಗುತ್ತಿರಬೇಕು. ಇಲ್ಲದಿದ್ದಲ್ಲಿ ದೇಹಕ್ಕೂ, ಮನಸ್ಸಿಗೂ ಕುಬ್ಜತೆ ಆವರಿಸುತ್ತದೆ. ಹಾಗಾಗಿ ನಿಮ್ಮ ಪ್ರೀತಿ ನಿರಂತರವಾಗಿ ವಿಕಾಸವಾಗುತ್ತಿರಲಿ.
ಕಾಲೇಜಿನ ಟೈಮ್ ಪಾಸ್ ಸಮಯಕ್ಕೆ ಪ್ರೀತಿ ಬಲಿಯಾಗದಿರಲಿ. ಸಿಟಿ ಸುತ್ತಾಡಲು, ಹಸಿವಾದಾಗ ಹೊಟ್ಟೆ ತುಂಬಿಸಲು, ಸಂತೋಷ ತಾರಕಕ್ಕೇರಿದಾಗ ಅದನ್ನು ಹಂಚಿಕೊಳ್ಳಲೆಂದೇ, ಕೆಲವರು ಪಾರ್ಟ್ ಟೈಮ್ ಪ್ರೇಮಿಗಳನ್ನು ಅರಸುತ್ತಿದ್ದಾರೆ. ಈ ನಿಮ್ಮ ಪುರಾತನ ಪ್ರೇಮದ ಅಮಲನ್ನು ಇಂದಾದರು ಸುಟ್ಟುಬಿಡಿ..

ಒಂದು ದಿನ ಧರಿಸಿ ಸಂಭ್ರಮಿಸುವ ಉಡುಪನ್ನು ಆಯ್ಕೆಮಾಡುವಾಗ, ನೂರಾರು ಬಾರಿ ಯೋಚಿಸುವ ನೀವು, ಅನುದಿನವೂ ಉಸಿರಂತೆ ಸದಾ ಜೊತೆಗಿರುವ ಸಂಗಾತಿಯ ಆಯ್ಕೆಯಲ್ಲಿ ಅಷ್ಟೇಕೆ ಆತುರವಹಿಸುತ್ತೀರಿ?
ಬದುಕು ನಿಮ್ಮ ಕೈಯಲಿಲ್ಲ, ಅದು ಸಾವಿರಾರು ಎಲ್ಲೆಗಳನ್ನು ಮೀರಿ ನಡೆಯುವ ಸುದೀರ್ಘ ಪಯಣ. ನೋವು-ನಲಿವುಗಳನ್ನು ಸಮವಾಗಿ ಹಂಚಿಕೊಂಡು ಬದುಕಬೇಕಾದ ಸನ್ನಿವೇಶ. ನೀವೂ ಎಲ್ಲದಕ್ಕೂ ತಯಾರಿರಬೇಕು. ಆಯ್ಕೆಯಲ್ಲಿ ಸ್ಪಷ್ಟತೆ ಇರಲಿ, ಪ್ರೀತಿ ಅಮರವಾಗಿರಲಿ.

ಹಲವರ ಬದುಕಿನಲ್ಲಿ ಪ್ರೀತಿ ಅರ್ಧದಲ್ಲೇ ಕಳಚಿಕೊಳ್ಳುವುದಕ್ಕೆ ತಪ್ಪುಆಯ್ಕೆ, ಅವಸರ , ಮೋಜು , ಆಲಸ್ಯ ಮುಖ್ಯ ಕಾರಣವಾಗಿವೆ.. ಇವು ಕೇವಲ ಹುಡುಗನೊಬ್ಬನಿಗೆ ಅನ್ವಯಿಸುವುದಿಲ್ಲ. ಶೇ100 ಕ್ಕೆ 100 ಹುಡುಗಿಯರಿಗೂ ಅನ್ವಯಿಸುತ್ತವೆ..

ಹಲವರಿಗೆ ಪ್ರೀತಿ ಅನಿವಾರ್ಯ, ಕುಟುಂಬದಲ್ಲಿ ಪ್ರೀತಿಯ ಕೊರತೆ ಇದ್ದಾಗ , ಇನ್ನೊಂದೆಡೆ ಪ್ರೀತಿ ಅರಸುವುದು ಸಹಜವೇ..
ಕೆಲವರಿಗೆ ಅನಿವಾರ್ಯ ಇಲ್ಲದಿದ್ದರೂ ಅಗತ್ಯತೆ ಕಾಣಬಹುದು. ಹೊಸ ಅನುಭವವನ್ನು ಆಸ್ವಾದಿಸುವ ಹಂಬಲ ಮೂಡಬಹುದೇನೋ.. ಅಥವಾ ಪ್ರೀತಿ ಬದುಕನ್ನು ಬದಲಿಸಬಹುದಾದ ಶ್ರೇಷ್ಠ ಅಸ್ತ್ರ ವಾಗಿ ಕಾಣಬಹುದೇನೋ..
ಇನ್ನೂ ಕೆಲವರಿಗೆ ಅನಿವಾರ್ಯ ಅಗತ್ಯತೆ ಯನ್ನು ಮೀರಿ, ಹೊಸ ಜೀವ ಭಾವಗಳಿಗೆ ಮನಸೋಲಬಹುದೇನೋ, ಶ್ರದ್ಧೆಗೆ ಸವಾಲಾಗಬಹುದೇನೋ, ತಾಳ್ಮೆಗೆ ಪರೀಕ್ಷೆಯಾಗಬಹುದೇನೋ, ಕೊನೆಗೆ ಪ್ರೀತಿ ರಸಪಾಕವೂ ಆಗಬಹುದು…

ಪ್ರಿಯ ಗೆಳೆಯ ಗೆಳತಿಯರೇ, ಪ್ರೀತಿ ಒಂದು ವೈಭವ, ಅವಿಸ್ಮರಣೀಯ ಅನುಭವ, ಪ್ರೀತಿಗೆ ಎಲ್ಲವನ್ನೂ ಒಲಿಸಿಕೊಳ್ಳುವ ಅದ್ಭುತ ಶಕ್ತಿಯಿದೆ.. ಪ್ರೀತಿಯೊಂದಿದ್ದರೆ ಸಾವಿನಂಚಿನಿಂದಲೂ ಪಾರಾಗಬಹುದು..

ಪ್ರೀತಿಸಿ, ಮೊದಲು ನಿಮ್ಮನ್ನು ನೀವು ಪ್ರೀತಿಸಿ, ಅನಂತರ ಇತರರನ್ನು ಪ್ರೀತಿಸಿ, ಪ್ರೀತಿಸುವ ಮುನ್ನ ಸ್ವಲ್ಪ ಯೋಚಿಸಿ. ಹಾಗೆ ಪ್ರೀತಿಸುವಾಗ ” ಪ್ರೀತಿ ಮಾಡು ತಪ್ಪೇನಿಲ್ಲ” ಎಂಬ ಸಾಲುಗಳೇ ನಿಮಗೆ ದೈರ್ಯವಾಗಿರಲಿ..
ಕೆಲವೊಮ್ಮೆ ದೂರನೇ ಇದ್ದರೂ, ಪ್ರೀತಿಸೋ ಇಬ್ಬರು ಎಂಬ ಸಾಲುಗಳಿಗೂ ಬದ್ಧವಾಗಿರಿ..
ಕೊನೆಯದಾಗಿ ಪರಿಶುದ್ಧ ಪ್ರೀತಿಯ ಪ್ರೇಮಿಗಳಿಗೆಲ್ಲ ಪ್ರೇಮಿಗಳ ದಿನದ ಹಾರ್ದಿಕ ಶುಭಾಶಯಗಳು…

ಬರಹ
ದಿವ್ಯಶ್ರೀ ಬಿ ಎಮ್
ತೃತೀಯ ಬಿ ಎ
ಸಹ್ಯಾದ್ರಿ ಕಲಾ ಕಾಲೇಜ್ ಶಿವಮೊಗ್ಗ..

Exit mobile version