Site icon TUNGATARANGA

ತಾಯಿ ಮಗನಿಗೆ ಉಚಿತ ಗೂಡು ನೀಡಲಾಗದೆ..? ಶಿವಮೊಗ್ಗ ಮಹಾನಗರ ಪಾಲಿಕೆ ಈ ವೃದ್ದರ ಅಳಲು ಕೇಳಲೇಬೇಕಿದೆ..,

ತುಂಗಾತರಂಗ ಮಾನವೀಯ ವರದಿ


ಶಿವಮೊಗ್ಗ ಕುಂಬಾರ ಗುಂಡಿಯ ಕೆ.ನಾಗರಾಜರಾವ್ ಕಾಂಪೌಂಡ್‌ನ ತಂಗಿಯ ಮನೆಯ ಕೊಠಡಿಯಲ್ಲಿ ವಾಸಿಸುತ್ತಿರುವ ಸುಮಾರು 66 ವರ್ಷ ವಯಸ್ಸಿನ ವೃದ್ಧರಾದ ರಾಜಗೋಪಾಲ್ ಪಿ.ವಿ. ಹಾಗೂ ಅವರ ತಾಯಿ ಶೇಷಮ್ಮ ಎಂಬ 86 ವರ್ಷ ವಯಸ್ಸಿನ ಹಣ್ಣು, ಹಣ್ಣು ವೃದ್ಧೆಯ ಗೋಳಿನ ಕಥೆಯನ್ನು ಶಿವಮೊಗ್ಗ ಮಹಾನಗರ ಪಾಲಿಕೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಆಶ್ರಯ ಸಮಿತಿ ಕೇಳಲೇ ಬೇಕಿದೆ.
ಶೇಷಮ್ಮ ಅವರು ಹಿಂದೆ ಅಂಚೆ ಕಛೇರಿಯಲ್ಲಿದ್ದ ವರದರಾಜು ಅವರ ಪತ್ನಿಯಾಗಿದ್ದು, ಅವರ ಪಿಂಚಣಿ ಹಣ ಸಾವಿರದಷ್ಟು ಸಿಗುತ್ತಿದೆ. ರಾಜಗೋಪಾಲ್‌ಗೂ ಸಹ ವೃದ್ದಾಪ್ಯ ವೇತನದ ಬಿಡಿಕಾಸಿನಿಂದ ಬದುಕು ಸಾಗುತ್ತಿದೆ. ಆದರೆ ಬದುಕಲು ಮನೆಯಿಲ್ಲ. ಈ ಹಿನ್ನೆಲೆಯಲ್ಲಿ ಆಶ್ರಯ ಸಮಿತಿಗೆ ರಾಜಗೋಪಾಲ್ ಅವರು ಆಶ್ರಯ ಸಮಿತಿ ಮನೆಯನ್ನು ಪಡೆಯಲು ಅರ್ಜಿ ಸಲ್ಲಿಸಿದ್ದರು. ಅವರಿಗೆ ಮನೆ ಇಲ್ಲದಿರುವ ಸತ್ಯಾಂಶ ಅರಿತ ನಗರ ಪಾಲಿಕೆ ರಾಜಗೋಪಾಲ್‌ರಿಗೆ ಮನೆ ನೀಡಲು ಸಹಮತಿ ವ್ಯಕ್ತಪಡಿಸಿತು.


ಈ ಹಿನ್ನೆಲೆಯಲ್ಲಿ ಹೇಗೋ ಕಷ್ಟಪಟ್ಟು ರಾಜಗೋಪಾಲ್ ಅವರು ವಾಜಪೇಯಿ ನಗರ ವಸತಿಯೋಜನೆಯಡಿ ಜಿ+೨ ಮಾದರಿಯ ನಿವೇಶನಕ್ಕೆ ಸಲ್ಲಿಸಿದ್ದ ಅರ್ಜಿಗೆ 8200 ರೂ ನಗದು ಹಣವನ್ನು ಕಳೆದ 12-11-2017 ದು ಕಟ್ಟಿದ್ದಾರೆ. ಆದರೆ ಮುಂದೆ ಕಟ್ಟಬೇಕಾದ ೮೦ಸಾವಿರ ರೂ ಹಣವಿಲ್ಲದೇ. ನಿವೇಶನವನ್ನು ಪಡೆಯಲಾಗದೇ ಒದ್ದಾಡುತ್ತಿರುವ ರಾಜಗೋಪಾಲ್ ಅವರು ಮನೆ ಇಲ್ಲದೇ. ಪರಿತಪಿಸುತ್ತಿದ್ದಾರೆ. ಅವರಂತಹ ತುಂಬಾ ಆರ್ಥಿಕ ದುರ್ಬಲ ವ್ಯಕ್ತಿಗಳಿಗೆ ಸ್ಪಂದಿಸುವ ಯಾವುದೇ ಪ್ರಯತ್ನಗಳು ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಇಲ್ಲಿಯವರೆಗೂ ನಡೆದಿಲ್ಲ.
ವಿಶೇಷವೆಂದರೆ ೨೦೧೫ರಲ್ಲೇ ನೊಂದ ರಾಜಗೋಪಾಲ್ ಅವರು ಅಂದಿನ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಆಶ್ರಯ ಯೋಜನೆಯಡಿ ಉಚಿತ ನಿವೇಶನ ನೀಡಲು ಸೂಚಿಸಿದ್ದರು.
ಮಾನವೀಯ ನೆಲೆಗಟ್ಟಿನಲ್ಲಿ ಈ ನೊಂದ ವೃದ್ದರಿಬ್ಬರಿಗೆ ಸೂರು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಾಪೌರರಾದ ಸುನೀತಾ ಅಣ್ಣಪ್ಪ, ಆಯುಕ್ತರಾದ ಚಿದಾನಂದ ವಠಾರೆ, ಕನಿಷ್ಠ ಪಕ್ಷ ಮನುಷ್ಯತ್ವ ಹೊಂದಿರುವ ಯಾವುದಾದರೂ ಪಾಲಿಕೆಯ ಸದಸ್ಯರು ಈ ವೃದ್ಧರಿಗೆ ಚಿಕ್ಕದೊಂದು ಸೂರು ಕಟ್ಟಿಕೊಟ್ಟು ಅಂತಿಮ ದಿನಗಳನ್ನು ಆನಂದದಿಂದ ಕಳೆಯಲು ಅನುವು ಮಾಡಿಕೊಡಲು ಕೋರಿದ್ದಾರೆ.
ಶಿವಮೊಗ್ಗ ಶಾಸಕರು, ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು, ಹಾಲಿ ಸಚಿವರು ಆದ ಕೆ.ಎಸ್.ಈಶ್ವರಪ್ಪ, ಸಂಸದರಾದ ರಾಘವೇಂದ್ರ ಅವರೇ ನೀವಾದರೂ ನಿಜ ನೊಂದ ಸಮಸ್ಯೆಗೆ ಸ್ಪಂದಿಸಿ.
ವಿವರ ಪಡೆಯಲಿಚ್ಚಿಸುವವರು 9972377373 ಸಂಪರ್ಕಿಸಿ
.

Exit mobile version